ಮುಂಬೈ: ಆಟೋ ಚಾಲಕನೊಬ್ಬ ಕೇವಲ 18 ಕಿಲೋಮೀಟರ್ ಪ್ರಯಾಣಿಸಿದ್ದಕ್ಕೆ ಬೆಂಗಳೂರು ಮೂಲದ ಟೆಕ್ಕಿಗೆ 4,300 ರೂ. ಚಾರ್ಜ್ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಬೆಳಗ್ಗೆ 5 ರಿಂದ ಪ್ರಯಾಣ ಆರಂಭಿಸಿದ್ದು, ಪುಣೆಯ ಕತ್ರಜ್ನಿಂದ ಯೆರವಾಡಾಕ್ಕೆ ಟೆಕ್ಕಿಗೆ ಆಟೋ ಚಾಲಕ 4,300 ರೂ. ಚಾರ್ಜ್ ಮಾಡಿದ್ದಾನೆ. ಅಲ್ಲದೆ, ಮೀಟರ್ ಪ್ರಕಾರ ಹಣ ಪಾವತಿಸವುದಾಗಿ ಎಂಜಿನಿಯರ್ ಹೇಳಿದ್ದಾರೆ.
ಕೆಲಸಕ್ಕಾಗಿ ಟೆಕ್ಕಿ ಬೆಂಗಳೂರಿನಿಂದ ಪುಣೆಗೆ ಬಂದಿದ್ದರು. ಯೆರವಾಡಾ ಪೊಲೀಸ್ ಠಾಣೆ ಬಳಿ ಅವರಿಗೆ ಕಂಪನಿಯಿಂದ ವಸತಿ ಸೌಕರ್ಯವನ್ನು ಕಲ್ಪಿಸಲಾಗಿತ್ತು. ಹೀಗಾಗಿ ಯೆರವಾಡಾಕ್ಕೆ ಆಟೋ ಮಾಡಿಕೊಂಡು ಬಂದಿದ್ದರು.
ಎಂಜಿನಿಯರ್ ಈ ಕುರಿತು ಪ್ರತಿಕ್ರಿಯೆ ನೀಡಿ, ಬುಧವಾರ ಬೆಳಗ್ಗೆ 5 ಗಂಟೆಗೆ ಕತ್ರಜ್-ದೇಹು ರಸ್ತೆಯ ಬೈಪಾಸ್ ಬಳಿ ಬಸ್ಸಿನಲ್ಲಿ ಇಳಿದೆ. ನಂತರ ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸಿದೆ. ಆದರೆ ಯಾವುದೇ ವಾಹನಗಳು ಲಭ್ಯವಿರಲಿಲ್ಲ. ಅಷ್ಟರಲ್ಲಿ, ಆಟೋ ಸಮೀಪಿಸುತ್ತಿರುವುದನ್ನು ಗಮನಿಸಿದೆ. ಒಬ್ಬ ವ್ಯಕ್ತಿ ಆಟೋ ಓಡಿಸುತ್ತಿದ್ದನು. ಆದರೆ ಪ್ರಯಾಣಿಕರ ಸೀಟ್ನಲ್ಲಿ ಆಟೋ ಚಾಲಕ ಕುಡಿದು ಕುಳಿತಿದ್ದನು. ಕೇಳಿದ್ದಕ್ಕೆ ಪೊಲೀಸ್ ಠಾಣೆಯನ್ನು ತಪ್ಪಿಸಲು ನನ್ನ ಸ್ನೇಹಿತನಿಗೆ ಆಟೋ ಓಡಿಸಲು ಕೇಳಿಕೊಂಡೆ ಎಂದು ಹೇಳಿದ ಎಂದು ಎಂಜಿನಿಯರ್ ವಿವರಿಸಿದ್ದಾರೆ.
ಪ್ರಯಾಣ ಪ್ರಾರಂಭಿಸುವುದಕ್ಕೂ ಮೊದಲು ಮೀಟರ್ ಜೀರೋದಲ್ಲಿತ್ತೇ ಎಂಬುದನ್ನು ನಾನು ನೋಡಿರಲಿಲ್ಲ. ಪ್ರಯಾಣ ಮುಗಿದ ನಂತರ ಒಟ್ಟು 4,300 ರೂ. ಚಾರ್ಜ್ ಆಗಿದೆ ಎಂದು ಚಾಲಕ ತಿಳಿಸಿದ. ಅಷ್ಟು ಏಕೆ ಎಂದು ಕೇಳಿದ್ದಕ್ಕೆ ನಗರ ಪ್ರವೇಶಿಸಲು 600 ರೂ. ಪಾವತಿಸಿದ್ದೇವೆ. ನಗರವನ್ನು ತೊರೆಯಲು 600 ರೂ. ಪಾವತಿಸಿದ್ದೇವೆ. ಉಳಿದ 3,100 ರೂ. ಕಿಲೋಮೀಟರ್ ಶುಲ್ಕವಾಗಿದೆ ಒಟ್ಟು 4,300 ರೂ. ಪಾವತಿಸಬೇಕು ಎಂದು ತಿಳಿಸಿದ. ಆದರೆ ಕತ್ರಜ್ನಿಂದ ಯೆರವಾಡಾಕ್ಕೆ ಕೇವಲ 18 ಕಿ.ಮೀ.ಮಾತ್ರ ದೂರವಿದೆ ಎಂದು ತಿಳಿಸಿದ್ದಾರೆ.
ಅಪರಿಚಿತ ಊರು, ರಸ್ತೆಯಲ್ಲಿ ಜನ ಯಾರೂ ಇಲ್ಲದ್ದನ್ನು ಕಂಡು ಎಂಜಿನಿಯರ್ ಭಯಭೀತನಾಗಿ ಆಟೋ ಶುಲ್ಕ ಪಾವತಿಸಿದ್ದಾರೆ. ಅಲ್ಲದೆ ಕುಡಿದಿದ್ದರಿಂದ ಇಬ್ಬರನ್ನೂ ಕಂಡು ಹೆದರಿದ್ದಾರೆ. ನಂತರ ಪೊಲೀಸ್ ಠಾಣೆಗೆ ತೆರಳಿ ಆಟೋರಿಕ್ಷಾ ನಂಬರ್ ನೀಡಿ ಎಂಜಿನಿಯರ್ ದೂರು ನೀಡಿದ್ದಾರೆ.
ಈ ಕುರಿತು ಯರವಾಡಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ದೂರನ್ನು ಸ್ವೀಕರಿಸಿದ್ದೇವೆ. ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕಳುಹಿಸಿದ್ದೇವೆ. ಶಂಕಿತರನ್ನು ಹುಡುಕಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.