ಚಿಕ್ಕೋಡಿ: ವಯಸ್ಸಾದ ಅವಿವಾಹಿತ ಪುರುಷರನ್ನೇ ಟಾರ್ಗೆಟ್ ಮಾಡಿಕೊಂಡು ಮದುವೆ (Marriage) ಹೆಸರಲ್ಲಿ ವಂಚನೆ ಎಸಗುತ್ತಿದ್ದವರು ಸಿಕ್ಕಿಬಿದ್ದ ಘಟನೆ ರಾಯಬಾಗ (Raibag) ತಾಲೂಕಿನ ಕಂಕನವಾಡಿ ಗ್ರಾಮದಲ್ಲಿ ನಡೆದಿದೆ.
ಈ ಗ್ಯಾಂಗಿನ ಸದಸ್ಯನೊಬ್ಬನನ್ನು ಕಂಕನವಾಡಿ ಗ್ರಾಮಸ್ಥರು ರಾಯಬಾಗ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸ್ ಇಲಾಖೆ ಈ ರೀತಿ ಮೋಸ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಏನಿದು ಪ್ರಕರಣ?
ಗ್ರಾಮೀಣ ಭಾಗದ ಯುವಕರನ್ನು ಮದುವೆಯಾಗಲು ಇಂದು ಹುಡುಗಿಯರು ಹಿಂದೇಟು ಹಾಕುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಗ್ಯಾಂಗ್ ಬಡ ಕುಟುಂಬಗಳನ್ನು ಗುರಿಯಾಗಿಸಿ ಮದುವೆ ಮಾತುಕತೆ ನಡೆಸುತ್ತಿತ್ತು. ಇದನ್ನೂ ಓದಿ: ಶತ್ರು ಸಂಹಾರಕ್ಕೆ ಜನಿಸಿದ ಉಗ್ರ ಸ್ವರೂಪಿಣಿ ʻಪ್ರತ್ಯಂಗಿರಾ ದೇವಿʼ ದರ್ಶನ ಪಡೆದ ಡಿಕೆಶಿ
ಮಾತುಕತೆಗೆ ಹುಡುಗನ ಕಡೆಯಿಂದ ಒಪ್ಪಿಗೆ ಸಿಕ್ಕಿದ ಕೂಡಲೇ 3 ಲಕ್ಷ ರೂ. ನೀಡುವಂತೆ ಕೇಳುತ್ತಿದ್ದರು. 3 ಲಕ್ಷ ರೂ. ನೀಡಿದರೆ ಹುಡುಗಿಯನ್ನು ತೋರಿಸುವುದಾಗಿ ಹೇಳುತ್ತಿದ್ದರು. ಅಷ್ಟೇ ಅಲ್ಲದೇ ಅಂದೇ ಮದುವೆ ಮಾಡಿಸುತ್ತೇವೆ ಎಂದು ಭರವಸೆ ನೀಡುತ್ತಿದ್ದರು. ಈ ಗ್ಯಾಂಗ್ ಸದಸ್ಯರ ಮಾತಿಗೆ ಒಪ್ಪಿ ವರನ ಪೋಷಕರು 3 ಲಕ್ಷ ರೂ. ಹಣವನ್ನು ನೀಡುತ್ತಿದ್ದರು.
ಹಣ ನೀಡಿದ ಬಳಿಕ ಯುವತಿ ಜೊತೆ ಸರಳವಾಗಿ ಮದುವೆ ನಡೆಯುತ್ತಿತ್ತು. ಮದುವೆಯಾದ ಒಂದು ತಿಂಗಳಿನಲ್ಲಿ ಹುಡುಗಿ ಹಣ, ಚಿನ್ನದೊಂದಿಗೆ ಪರಾರಿಯಾಗುತ್ತಿದ್ದಳು. ನಂತರ ಈ ಗ್ಯಾಂಗ್ ಆ ಹುಡುಗಿಗೆ ಮತ್ತೊಂದು ಮದುವೆ ಮಾಡಿಸಿ ದಂಧೆ ಮುಂದುವರಿಸುತ್ತಿದ್ದರು.
ಇತ್ತೀಚೆಗಷ್ಟೇ ಅಥಣಿ, ರಾಯಬಾಗ, ಹುಕ್ಕೇರಿ ಹಾಗೂ ಮಹಾರಾಷ್ಟ್ರ ಕರ್ನಾಟಕದ ಗಡಿ ಗ್ರಾಮಗಳಲ್ಲಿ ವಂಚನೆ ಬೆಳಕಿಗೆ ಬಂದಿದೆ. ಈ ರೀತಿ ಮದುವೆ ಮಾಡಿಸಲು ಈ ಗ್ಯಾಂಗ್ ಸದಸ್ಯನೊಬ್ಬ ಕಂಕನವಾಡಿ ಗ್ರಾಮಕ್ಕೆ ಬಂದಾಗ ಜನರಿಗೆ ಅನುಮಾನ ಬಂದಿದೆ. ಅನುಮಾನ ನಿಜವಾಗಿದ್ದು ಈಗ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮರ್ಯಾದೆಗೆ ಅಂಜಿ ಈತನ ವಿರುದ್ಧ ದೂರು ನೀಡಲು ಗ್ರಾಮಸ್ಥರು ಹಿಂದೇಟು ಹಾಕಿದ್ದಾರೆ. ಹೀಗಾಗಿ ಆತನನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ ಎಂಬ ವಿಚಾರ ಈಗ ತಿಳಿದು ಬಂದಿದೆ.