ನವದೆಹಲಿ: ಏಪ್ರಿಲ್ 1ರಿಂದ ಯಾವುದೇ ಕಾರಣಕ್ಕೂ ನೀವು 3 ಲಕ್ಷಕ್ಕಿಂತ ನಗದು ಹಣ ಸ್ವೀಕರಿಸಬೇಡಿ. ಒಂದು ವೇಳೆ 3 ಲಕ್ಷಕ್ಕಿಂತ ಹೆಚ್ಚು ಹಣ ಕೊಟ್ಟರೆ ಅಷ್ಟೇ ಮೊತ್ತದ ಫೈನ್ ಕಟ್ಟಬೇಕಾಗುತ್ತದೆ. ಕಪ್ಪು ಹಣದ ವಹಿವಾಟಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಘೋಷಿಸಿರುವ 3 ಲಕ್ಷ ರೂ. ನಗದು ವಹಿವಾಟು ಮಿತಿ ಏಪ್ರಿಲ್ 1ರಿಂದ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಹೇಳಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಿಗದಿತ ಮಿತಿಗಿಂತ ಹೆಚ್ಚು ಹಣದ ನಗದು ವಹಿವಾಟು ನಡೆಸಿದರೆ ಭಾರೀ ದಂಡ ಪಾವತಿಸಬೇಕಾಗುತ್ತದೆ. ಇದು ನೀವು ಸ್ವೀಕರಿಸಿದ ಹಣದ ಮೊತ್ತಕ್ಕೆ ಸರಿಸಮನಾಗಿರಬಹುದು ಎಂದು ಹೇಳಿದ್ದಾರೆ.
Advertisement
ಒಂದು ವೇಳೆ ನೀವು 4 ಲಕ್ಷ ರೂ. ವಹಿವಾಟು ನಡೆಸಿದರೆ ದಂಡ 4 ಲಕ್ಷ ರೂಪಾಯಿ. ನೀವು 50 ಲಕ್ಷ ರೂ.ಗಳ ವಹಿವಾಟು ನಡೆಸಿದರೆ ದಂಡ 50 ಲಕ್ಷ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಹಣವನ್ನು ಸ್ವೀಕರಿಸಿದ ವ್ಯಕ್ತಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದರು. ಯಾರಾದರೂ ನಗದು ಹಣ ನೀಡಿ ದುಬಾರಿ ವಾಚ್ ಖರೀದಿಸಿದರೆ, ಹಣವನ್ನು ಸ್ವೀಕರಿಸಿದ ಅಂಗಡಿಯ ಮಾಲೀಕರೇ ದಂಡ ಪಾವತಿಸಬೇಕಾಗುತ್ತದೆ. ಭಾರೀ ಪ್ರಮಾಣದ ಹಣದ ವಹಿವಾಟು ನಡೆಸುವುದನ್ನು ತಡೆಗಟ್ಟುವುದೇ ನಮ್ಮ ಉದ್ದೇಶ ಎಂದು ಹೇಳಿದರು.
Advertisement
ಈ ಹಿಂದೆ ಲೆಕ್ಕ ತೋರಿಸದ ಹಣವನ್ನು ಕೆಲವರು ಪ್ರವಾಸ, ದುಬಾರಿ ಕಾರು, ವಾಚ್ ಹಾಗೂ ಆಭರಣ ಖರೀದಿಗೆ ಬಳಸುತ್ತಿದ್ದರು. ಆದರೆ ಇನ್ನು ಮುಂದೆ ಈ ನಿಯಮಗಳು ಇದಕ್ಕೆ ತಡೆಯೊಡ್ಡಲಿವೆ. ಈ ಮೂಲಕ ಕಪ್ಪು ಹಣ ಚಲಾವಣೆಗೆ ಬ್ರೇಕ್ ಬೀಳಲಿದೆ ಎಂದು ಹೇಳಿದರು. ಹೊಸ ನಿಯಮಗಳು ಬ್ಯಾಂಕಿಂಗ್ ಕಂಪೆನಿಗಳು, ಪೋಸ್ಟ್ ಆಫೀಸ್ ಸೇವಿಂಗ್ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‍ಗಳಿಗೆ ಅನ್ವಯವಾಗುವುದಿಲ್ಲ.