ಮುಂಬೈ: 21 ಲಕ್ಷ ರೂ. ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ತಾಯಿ ಸುನಂದಾ ಶೆಟ್ಟಿ (Sunanda Shetty) ಯವರಿಗೆ ಕೋರ್ಟ್ ವಾರೆಂಟ್ ಜಾರಿ ಮಾಡಿದೆ.
ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (Metropolitan Magistrate) ಸುನಂದಾ ಶೆಟ್ಟಿ ಹಾಗೂ ಮಗಳು ಶಮಿತಾ ಶೆಟ್ಟಿ (ShamithaShetty) ಗೆ ಜಾಮೀನು ಪಡೆಯಬಹುದಾದಂತಹ ವಾರೆಂಟ್ ಜಾರಿ ಮಾಡಿದೆ. ಶಿಲ್ಪಾ ಶೆಟ್ಟಿ ಕುಟುಂಬವು ತನ್ನಿಂದ ಪಡೆದಿದ್ದ 21 ಲಕ್ಷ ರೂ. ಸಾಲವನ್ನು ಮರುಪಾವತಿ ಮಾಡಿಲ್ಲ ಎಂದು ಉದ್ಯಮಿಯೊಬ್ಬರು ದೂರು ದಾಖಲಿಸಿದ್ದರು. ಹೀಗಾಗಿ ಶಿಲ್ಪಾ ಶೆಟ್ಟಿ, ಅವರ ಸಹೋದರಿ ಶಮಿತಾ ಶೆಟ್ಟಿ ಹಾಗೂ ತಾಯಿ ಸುನಂದಾ ಶೆಟ್ಟಿ ವಿರುದ್ಧ ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಂಚನೆ ಪ್ರಕರಣದ ತನಿಖೆಗೆ ಆದೇಶಿಸಿತ್ತು.
ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಟಿ ಕುಟುಂಬ ದಿಂಡೋಶಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿತ್ತು. ಸೋಮವಾರ ಸೆಷನ್ಸ್ ಜಡ್ಜ್ ಎ ಝಡ್ ಖಾನ್ ಅವರು ಶಿಲ್ಪಾ ಹಾಗೂ ಶಮಿತಾ ವಿರುದ್ಧ ಮ್ಯಾಜಿಸ್ಟ್ರೆಟ್ ಆದೇಶ ತಡೆಹಿಡಿದಿದ್ದು, ಸುನಂದಾ ಅವರಿಗೆ ಯಾವುದೇ ರಿಲೀಫ್ ನೀಡಲಿಲ್ಲ. ಅಲ್ಲದೆ ತಂದೆ ದಿ. ಸುರೇಂದ್ರ ಶೆಟ್ಟಿ (Surendra Shetty) ಮತ್ತು ಸುನಂದಾ ಅವರ ಸಂಸ್ಥೆಯಲ್ಲಿ ಪಾಲುದಾರರು. ಆದರೆ ಇಬ್ಬರು ಹೆಣ್ಣು ಮಕ್ಕಳು ಕೂಡ ಇಲ್ಲಿ ಪಾಲುದಾರರಾಗಿದ್ದಾರೆ. ಈ ಬಗ್ಗೆ ಯಾವುದೇ ದಾಖಲೆಗಳನ್ನು ಸಲ್ಲಿಸಲಾಗಿಲ್ಲ ಎಂದು ಹೇಳಿದೆ. ಅಲ್ಲದೆ ಪ್ರಕರಣ ಸಬಂಧ ಜಾಮೀನು ನೀಡಬಹುದಾದ ವಾರೆಂಟ್ ಅನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಹೊರಡಿಸಿದೆ.
ಏನಿದು ಪ್ರಕರಣ..?
ಉದ್ಯಮಿಯೊಬ್ಬರು ಶಿಲ್ಪಾ ಸೇರಿ ಕುಟುಂಬದ ಮೂವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಈ ದೂರಿನ ಅನ್ವಯ ಶಿಲ್ಪಾ ಅವರ ತಂದೆ ದಿವಂಗತ ಸುರೇಂದ್ರ ಶೆಟ್ಟಿ 21 ಲಕ್ಷ ರೂ ಸಾಲವನ್ನು ಪಡೆದಿದ್ದರು. ಈ ಸಾಲವನ್ನು 2017ರ ಜನವರಿಯಲ್ಲಿ ಬಡ್ಡಿಯೊಂದಿಗೆ ಪಾವತಿಸಬೇಕಾಗಿತ್ತು. ಆದರೆ ಸಾಲವನ್ನು ಮರುಪಾವತಿಸಲು ಶಿಲ್ಪಾ, ಶಮಿತಾ ಮತ್ತು ಸುನಂದಾ ವಿಫಲರಾಗಿದ್ದಾರೆ ಎನ್ನಲಾಗಿದೆ.
ಸುರೇಂದ್ರ ಕಂಪನಿ ಪರವಾಗಿ ಚೆಕ್ ಬರೆದಿದ್ದು, ಸಾಲದ ವಿಚಾರ ಅವರ ಪುತ್ರಿಯರು ಮತ್ತು ಪತ್ನಿಗೆ ತಿಳಿದಿತ್ತು. ಆದರೆ ಸಾಲ ಮರುಪಾವತಿ ಮಾಡುವ ಮುನ್ನವೇ ಸುರೇಂದ್ರ ತೀರಿಕೊಂಡಿದ್ದರಿಂದ ಅದನ್ನು ಮರುಪಾವತಿಸುವ ಜವಾಬ್ದಾರಿ ಕುಟುಂಬದ್ದಾಗಿತ್ತು. ಆದರೆ ಕುಟುಂಬ ತಾವು ಹಣವೇ ಪಡೆದಿಲ್ಲ ಎಂದು ಹೇಳುತ್ತಿದೆ.