ಇಂದಿನಿಂದ 2,000 ಮುಖಬೆಲೆ ನೋಟು ವಿನಿಮಯ ಪ್ರಕ್ರಿಯೆ ಆರಂಭ

Public TV
2 Min Read
2000 NOTE 1

ನವದೆಹಲಿ: ಚಲಾವಣೆಯಿಂದ ಹಿಂಪಡೆದಿರುವ 2,000 ರೂ. ಮುಖಬೆಲೆಯ ನೋಟುಗಳನ್ನು (Rs. 2000  Note) ಮಂಗಳವಾರದಿಂದ ಬ್ಯಾಂಕುಗಳಿಗೆ (Bank) ನೀಡಿ ಬದಲಾಯಿಸಿಕೊಳ್ಳಬಹುದು (Exchange) ಅಥವಾ ಡೆಪಾಸಿಟ್ ಮಾಡಿಕೊಳ್ಳಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ತಿಳಿಸಿದೆ.

ಆರ್‌ಬಿಐ ಚಲಾವಣೆಯಿಂದ ಹಿಂಪಡೆದಿರುವ 2,000 ರೂ. ಮುಖಬೆಲೆಯ ನೋಟುಗಳನ್ನು ಎಲ್ಲ ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಬಹುದು. ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಯಲ್ಲಿ ನೀವು ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಅದಲ್ಲದೇ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ ನೀವು 2,000 ರೂ. ನೋಟುಗಳನ್ನು ಬದಲಿಸಿಕೊಳ್ಳಬಹುದು.

rs 2000 note

ನೋಟುಗಳ ವಿನಿಮಯಕ್ಕೆ ಅರ್ಜಿ ಬೇಕಿಲ್ಲ:
ಸಾರ್ವಜನಿಕರು ಬ್ಯಾಂಕ್‌ಗಳಲ್ಲಿ 2,000 ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಯಾವುದೇ ನಮೂನೆಯನ್ನು ಭರ್ತಿ ಮಾಡುವ ಅಗತ್ಯವಿಲ್ಲ. ಆರ್‌ಬಿಐ ಘೋಷಣೆಯ ಬಳಿಕ ರಿಕ್ವೆಸ್ಟ್ ಫಾರ್ಮ್ ಅನ್ನು ಭರ್ತಿ ಮಾಡಿ ನೋಟು ಬದಲಾವಣೆ ಮಾಡಬೇಕು ಎಂಬ ಸುದ್ದಿ ಹರಿದಾಡಿತ್ತು. ಆದರೆ ಭಾನುವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದು, ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡುವ ಅಗತ್ಯವಿಲ್ಲ ಎಂದಿದೆ.

ಗುರುತಿನ ಚೀಟಿ ಬೇಕಾ?
ನೋಟುಗಳ ವಿನಿಮಯ ಹಾಗೂ ಠೇವಣಿಗೆ ಗುರುತಿನ ಚೀಟಿ ನೀಡುವ ಅಗತ್ಯವಿಲ್ಲ ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ. ಆದ್ದರಿಂದ ನಿರಾತಂಕವಾಗಿ 2,000 ರೂ. ನೋಟು ಬದಲಾಯಿಸಿಕೊಳ್ಳಬಹುದು.

RBI

ನೋಟುಗಳ ಬದಲಾವಣೆಗೆ ಶುಲ್ಕ ಇದೆಯಾ?
2,000 ರೂಪಾಯಿ ನೋಟುಗಳ ವಿನಿಮಯ ಹಾಗೂ ಠೇವಣಿಗೆ ಯಾವುದೇ ಶುಲ್ಕವನ್ನು ಬ್ಯಾಂಕ್‌ಗಳಿಗೆ ಪಾವತಿಸಬೇಕಿಲ್ಲ. ಬ್ಯಾಂಕ್‌ಗಳು ಉಚಿತವಾಗಿಯೇ ನಿಮ್ಮ ನೋಟುಗಳನ್ನು ಬದಲಿಸಿಕೊಡುತ್ತವೆ.

ನೋಟು ಬದಲಾವಣೆಯ ಗಡುವು:
ಮೇ 19ರಂದು ಆರ್‌ಬಿಐ 2,000 ರೂ. ಮುಖಬೆಲೆಯೆ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದೆ. ಆದರೆ ನೋಟುಗಳ ವಿನಿಮಯಕ್ಕೆ ಸಾಕಷ್ಟು ಸಮಯಾವಕಾಶವನ್ನು ಆರ್‌ಬಿಐ ನೀಡಿದೆ. ಮೇ 23 ರಿಂದ ಸೆಪ್ಟೆಂಬರ್ 30 ರವರೆಗೂ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಲಾಗಿದ್ದು, ಈ 4 ತಿಂಗಳ ಗಡುವಿನಲ್ಲಿ ನೋಟುಗಳನ್ನು ಬದಲಿಸಿಕೊಳ್ಳಬಹುದು.

2000 rupees note

ಎಷ್ಟು ನೋಟು ಬದಲಿಸಿಕೊಳ್ಳಬಹುದು?
ಒಬ್ಬರು ಒಂದು ಬಾರಿ ಗರಿಷ್ಠ 2,000 ರೂ. ಮುಖಬೆಲೆಯ 10 ನೋಟುಗಳು ಅಂದರೆ 20,000 ರೂ.ಯನ್ನು ಬದಲಿಸಿಕೊಳ್ಳಬಹುದು ಎಂದು ಆರ್‌ಬಿಐ ಹೇಳಿದೆ. ಅದಲ್ಲದೇ ಒಬ್ಬ ವ್ಯಕ್ತಿ ಒಂದು ದಿನದಲ್ಲಿ ಎಷ್ಟು ಬಾರಿಯಾದರೂ ಸರತಿ ಸಾಲಿನಲ್ಲಿ ನಿಂತು ನೋಟುಗಳನ್ನು ಬದಲಿಸಿಕೊಳ್ಳಬಹುದು. ಆದರೆ ಒಂದು ಬಾರಿಗೆ ಗರಿಷ್ಠ 20,000 ರೂ. ಮಾತ್ರ ಬದಲಾವಣೆಗೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಮುಖ್ಯಮಂತ್ರಿ ಆಯ್ಕೆಗಿಂತಲೂ ಕಗ್ಗಂಟಾದ ವಿಪಕ್ಷ ನಾಯಕನ ಆಯ್ಕೆ

ಬ್ಯಾಂಕ್‌ಗಳಲ್ಲಿ 2,000 ರೂ. ನೋಟು ಡೆಪಾಸಿಟ್ ಅವಕಾಶ:
2,000 ರೂ. ಮುಖಬೆಲೆಯ ನೋಟು ಅಮಾನ್ಯವಾಗಿಲ್ಲ. ಅದನ್ನು ಕೇವಲ ಚಲಾವಣೆಯಿಂದ ಹಿಂಪಡೆಯಲಾಗಿದೆ. ಬ್ಯಾಂಕ್‌ಗಳಲ್ಲಿ 2,000 ರೂ. ನೋಟುಗಳನ್ನು ಜಮಾ ಮಾಡಬಹುದು. ಆದರೆ ಇದಕ್ಕೆ ಯಾವುದೇ ಮಿತಿಯನ್ನು ಆರ್‌ಬಿಐ ವಿಧಿಸಿಲ್ಲ. ಆದರೆ ನಿಗದಿತ ಮಿತಿ ದಾಟಿದ ಪ್ರಕರಣಗಳಲ್ಲಿ ಕೆವೈಸಿ ಸೇರಿ ಅಗತ್ಯ ಶಾಸನಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾದ ಅಗತ್ಯವಿದೆ.

ಬ್ಯಾಂಕ್ ಗ್ರಾಹಕರಲ್ಲದಿದ್ದರೂ ನೋಟು ಬದಲಾಯಿಸಿಕೊಳ್ಳಬಹುದು:
ಬ್ಯಾಂಕ್ ಗ್ರಾಹಕರಲ್ಲದಿದ್ದರು 2,000 ರೂ. ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಯಾವುದೇ ಬ್ಯಾಂಕಿನಲ್ಲಿ, ಆರ್‌ಬಿಐ ಪ್ರಾದೇಶಿಕ ಶಾಖೆಗಳಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಜನನ, ಮರಣ ಮಾಹಿತಿ ಮತದಾರರ ಪಟ್ಟಿಗೆ ಜೋಡಣೆ – ಶೀಘ್ರವೇ ಮಸೂದೆ ಮಂಡನೆ

Share This Article