ದಿಸ್ಪುರ್: ಆದಾಯಕ್ಕೂ ಮೀರಿದ ಆಸ್ತಿ ಸೇರಿದಂತೆ ಇನ್ನಿತರ ಆರೋಪಗಳ ಮೇಲೆ ಅಸ್ಸಾಂ ನಾಗರಿಕ ಸೇವಾ ಅಧಿಕಾರಿ (Assam Civil Service) ಮನೆ ಮೇಲೆ ವಿಜಿಲೆನ್ಸ್ ಸೆಲ್‌ನ ಅಧಿಕಾರಿಗಳು (CM’s Special Vigilance) ದಾಳಿ ನಡೆಸಿದ್ದು, 2 ಕೋಟಿ ರೂ. ನಗದು ಹಾಗೂ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.
ಗೋಲಾಘಾಟ್ (Golaghat) ನಿವಾಸಿ ನೂಪುರ್ ಬೋರಾ 2019ರಲ್ಲಿ ಅಸ್ಸಾಂ ನಾಗರಿಕ ಸೇವೆಗೆ ಸೇರಿಕೊಂಡಿದ್ದರು. ಬಳಿಕ ಅವರನ್ನು ಕಾಮರೂಪ ಜಿಲ್ಲೆಯ ಗೊರೊಯಿಮರಿಯಲ್ಲಿ ಸರ್ಕಲ್ ಆಫೀಸರ್ ಆಗಿ ನೇಮಿಸಲಾಗಿತ್ತು. ಸದ್ಯ ಅವರನ್ನು ವಿಜಿಲೆನ್ಸ್ ಸೆಲ್‌ನ ಅಧಿಕಾರಿಗಳು ಬಂಧಿಸಿದ್ದಾರೆ.ಇದನ್ನೂ ಓದಿ: 15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ
ಸೋಮವಾರ (ಸೆ.15) ವಿಜಿಲೆನ್ಸ್ ಸೆಲ್‌ನ ಅಧಿಕಾರಿಗಳು ನೂಪುರ್ ಬೋರಾ ಅವರ ಗುವಾಹಟಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 92 ಲಕ್ಷ ರೂ. ನಗದು ಹಾಗೂ 1 ಕೋಟಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಬಾರ್ಪೇಟಾದಲ್ಲಿರುವ (Barpeta) ಅವರ ಬಾಡಿಗೆ ಮನೆಯ ಮೇಲೆಯೂ ದಾಳಿ ನಡೆಸಿದ್ದು, 10 ಲಕ್ಷ ರೂ. ನಗದನ್ನು ಕೂಡ ಜಪ್ತಿ ಮಾಡಿಕೊಂಡಿದ್ದಾರೆ.
ಈ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಮಾತನಾಡಿ, ವಿವಾದಾತ್ಮಕ ಭೂ-ಸಂಬಂಧಿತ ವಿಚಾರಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಕಳೆದ ಆರು ತಿಂಗಳಿನಿಂದ ನೂಪುರ್ ಬೋರಾ ಅವರನ್ನು ಕಣ್ಗಾವಲಿನಲ್ಲಿರಿಸಲಾಗಿತ್ತು. ಈ ಮೊದಲು ಇವರನ್ನು ಬಾರ್ಪೇಟಾ ಕಂದಾಯ ವಲಯ ಅಧಿಕಾರಿಯಾಗಿ ನೇಮಿಸಿದಾಗ ಹಣದಾಸೆಗಾಗಿ ಹಿಂದೂ ಭೂಮಿಯನ್ನು ಅನುಮಾನಾಸ್ಪದ ವ್ಯಕ್ತಿಗಳಿಗೆ ವರ್ಗಾಯಿಸಿದ್ದರು. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನೂ ನೂಪುರ್ ಬೋರಾ ಜೊತೆ ಶಾಮೀಲಾಗಿ ಬಾರ್ಪೇಟಾದ ಹಲವು ಕಡೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಆರೋಪದ ಮೇಲೆ ಕಂದಾಯ ವಲಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಲತ್ ಮಂಡಲ್ ಸೂರಜಿತ್ ದೇಕಾ ಅವರ ನಿವಾಸದ ಮೇಲೆಯೂ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ; ಮನೆಗಳು, ಐಟಿ ಪಾರ್ಕ್ ಜಲಾವೃತ – ಇಬ್ಬರು ಕಣ್ಮರೆ