ಮಹಾತ್ಮ ಗಾಂಧೀಜಿ ಸ್ಮರಣಾರ್ಥ 150 ರೂ. ಹೊಸ ನಾಣ್ಯ ಬಿಡುಗಡೆ

Public TV
2 Min Read
150 rs coin modi 2

ಅಹಮದಾಬಾದ್: ರಾಷ್ಟ್ರಪಿತ ಮಹಾತ್ಮ ಗಾಂಧೀಯವರ 150ನೇ ಜಯಂತೋತ್ಸವದ ಪ್ರಯುಕ್ತ ಪಿತಾಮಹನ ಸ್ಮರಣಾರ್ಥವಾಗಿ ಕೇಂದ್ರ ಸರ್ಕಾರ 150 ರೂಪಾಯಿ ಹೊಸ ನಾಣ್ಯವನ್ನು ಬುಧವಾರ ಬಿಡುಗಡೆ ಮಾಡಿದೆ.

ಅಹಮದಾಬಾದ್‍ನಲ್ಲಿರುವ ಸಾಬರ್‍ಮತಿ ಆಶ್ರಮದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 150 ರೂಪಾಯಿಯ ಹೊಸ ನಾಣ್ಯವನ್ನು ಬಿಡುಗಡೆ ಮಾಡಿದರು. ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಇಡೀ ಪ್ರಪಂಚವೇ ಬಾಪು ಅವರ ಜಯಂತೋತ್ಸವವನ್ನು ಆಚರಿಸುತ್ತಿದೆ. ಕೆಲವು ದಿನಗಳ ಹಿಂದೆ ಗಾಂಧೀಜಿಯವರ 150ನೇ ಜಯಂತಿಯ ಸ್ಮರಣಾರ್ಥವಾಗಿ ಯುಎನ್ ಪೋಸ್ಟಲ್ ಸ್ಟಾಂಪ್ಸ್ ಗಳನ್ನು ಬಿಡುಗಡೆ ಮಾಡಿ ನಮನ ಸಲ್ಲಿಸಿತ್ತು. ಈಗ ನಾವು ಹೊಸ ನಾಣ್ಯ ಬಿಡುಗಡೆ ಮಾಡಿ ಗಾಂಧೀಜಿಗೆ ನಮನ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

ಕೇವಲ ಶೌಚಾಲಯಗಳು ನಿರ್ಮಾಣವಾದರೆ ಸಾಲದು, ಅದರ ನಿಯಮಿತ ಬಳಕೆ ಅಗತ್ಯ ಎಂದು ಪ್ರತಿಪಾದಿಸುವ ಮೂಲಕ ಭಾರತವನ್ನು ಬಯಲು ಶೌಚ ಮುಕ್ತ ಎಂದು ಮೋದಿ ಘೋಷಿಸಿದರು. ಗಾಂಧೀಜಿ ಅವರ 150ನೇ ಜಯಂತೋತ್ಸವದ ಸಮಯದಲ್ಲಿ ದೇಶ ಈ ಸಾಧನೆ ಗೈದಿರೋದು ತೃಪ್ತಿ ನೀಡಿದೆ. ನಾವು ಗಾಂಧೀಜಿ ಅವರ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸಲು ಸಾಕ್ಷಿಯಾಗಿದ್ದೇವೆ. ಭಾರತವನ್ನು ಬಯಲು ಶೌಚ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.

ಗ್ರಾಮೀಣ ಭಾರತ ಹಾಗೂ ಅದರ ಗ್ರಾಮಗಳು ತಮ್ಮ ಪ್ರದೇಶಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿವೆ. 2014 ರಲ್ಲಿ ಈ ಗುರಿಯನ್ನು ನಿಗದಿಪಡಿಸಲಾಗಿತ್ತು. ಇದಕ್ಕೆ ಸ್ವಯಂ ಪ್ರೇರಿತವಾಗಿ ನಡೆಯುತ್ತಿರುವ ಸ್ವಚ್ಛ ಭಾರತ ಅಭಿಯಾನ ಶಕ್ತಿ ಹಾಗೂ ಯಶಸ್ಸಿನ ಮೂಲವಾಗಿದೆ. ಕಳೆದ 60 ತಿಂಗಳುಗಳಲ್ಲಿ ಸರ್ಕಾರ 60 ಕೋಟಿ ಮಂದಿಗೆ ಶೌಚಾಲಯದ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಸುಮಾರು 11 ಕೋಟಿಗೂ ಅಧಿಕ ಶೌಚಾಲಯವನ್ನು ಕಟ್ಟಿಸಿಕೊಟ್ಟಿದೆ. ಇದು ಇಡೀ ವಿಶ್ವವನ್ನೇ ಅಚ್ಚರಿಗೊಳಿಸಿದೆ, ಜಗತ್ತಿನಾದ್ಯಂತ ಭಾರತವನ್ನು ಪ್ರಶಂಸಿಸಲಾಗುತ್ತಿದೆ ಎಂದು ಖುಷಿಯನ್ನು ಹಂಚಿಕೊಂಡರು.

ಅಷ್ಟೇ ಅಲ್ಲದೇ ನಾವು ದೇಶವನ್ನು 2022ರ ಹೊತ್ತಿಗೆ ಏಕ-ಬಳಿಕೆ ಪ್ಲಾಸ್ಟಿಕ್‍ನಿಂದ ಮುಕ್ತಗೊಳಿಸುವ ಪಣತೊಟ್ಟಿದ್ದೇವೆ. ಸ್ವಚ್ಛ ಭಾರತ ಅಭಿಯಾಕ್ಕೆ ಒತ್ತು ಕೊಟ್ಟಂತೆ ಜನರು ಇದಕ್ಕೂ ಬೆಂಬಲ ನೀಡಬೇಕು. ನೈರ್ಮಲ್ಯ, ಪರಿಸರ ಮತ್ತು ಪ್ರಾಣಿಗಳ ಸಂರಕ್ಷಣೆ ಈ ಎಲ್ಲಾ ವಿಷಯಗಳು ಗಾಂಧೀಜಿ ಅವರಿಗೆ ಪ್ರಿಯವಾದವು. ಪರಿಸರಕ್ಕೆ ಪ್ಲಾಸ್ಟಿಕ್ ದೊಡ್ಡ ಅಪಾಯವಾಗಿದೆ. ಆದ್ದರಿಂದ, 2022ರ ವೇಳೆಗೆ ದೇಶದಿಂದ ಏಕ-ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ಗುರಿಯನ್ನು ನಾವು ಸಾಧಿಸಬೇಕಾಗಿದೆ ಎಂದು ಮೋದಿ ಕರೆ ಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *