– 17.705 ಕೆಜಿ ಚಿನ್ನ ಕಳ್ಳತನ
– ಶ್ವಾನದಳದ ಕಣ್ತಪ್ಪಿಸಲು ಖಾರದ ಪುಡಿ ಬಳಕೆ!
ದಾವಣಗೆರೆ: ನ್ಯಾಮತಿಯ ಎಸ್‍ಬಿಐ ಬ್ಯಾಂಕ್‍ನಲ್ಲಿದ್ದ 12.95 ಕೋಟಿ ರೂ. ಮೌಲ್ಯದ 17.705 ಕೆಜಿ ಚಿನ್ನಾಭರಣವನ್ನು (Gold) ಕಳ್ಳರು ಹೊತ್ತೊಯ್ದಿದ್ದಾರೆ ಎಂದು ಬ್ಯಾಂಕ್ ಮ್ಯಾನೇಜರ್ ಸುನೀಲ್ ಕುಮಾರ್ ಯಾದವ್ ಮಾಹಿತಿ ನೀಡಿದ್ದಾರೆ.
ನಗರದ ನೆಹರು ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಶಾಖೆಯಲ್ಲಿ ಕಿಟಕಿ ಸರಳುಗಳನ್ನು ಮುರಿದು ಲಾಕರ್‌ನಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ಕಳ್ಳರು ಹೊತ್ತೊಯ್ದಿದ್ದರು. ಎರಡು ದಿನಗಳ ಹಿಂದೆ ಕಳ್ಳರು ಈ ಕೃತ್ಯ ಎಸಗಿರುವ ಬಗ್ಗೆ ನ್ಯಾಮತಿ ಪೊಲೀಸರು (Police) ಶಂಕೆ ವ್ಯಕ್ತಪಡಿಸಿದ್ದಾರೆ. ಶನಿವಾರ ಹಾಗೂ ಭಾನುವಾರ ಎರಡು ದಿನ ಬ್ಯಾಂಕ್ ರಜೆ ಇದ್ದ ಕಾರಣ ಶುಕ್ರವಾರ ರಾತ್ರಿ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.
ಕಳ್ಳರು ಗುರುತು ಪತ್ತೆಯಾಗದಂತೆ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಸಮೇತ ಪರಾರಿಯಾಗಿದ್ದರು. ಅಲ್ಲದೇ ಶ್ವಾನದಳದ ಶ್ವಾನಗಳಿಗೆ ವಾಸನೆ ಗ್ರಹಿಸಲು ಸಾಧ್ಯವಾಗದಂತೆ ಬ್ಯಾಂಕ್‌ನ ಒಳಗಡೆ ಖಾರದ ಪುಡಿ ಎರಚಿದ್ದಾರೆ. ಕಳ್ಳರನ್ನು ಹಿಡಿಯಲು ಎಎಸ್ಪಿ ಸ್ಯಾಮ್ ವರ್ಗೀಸ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.
ಐದು ವರ್ಷಕ್ಕೊಮ್ಮೆ ಬ್ಯಾಂಕ್ ಕಳ್ಳತನ!
ಹೊನ್ನಾಳಿ- ನ್ಯಾಮತಿಯಲ್ಲಿ ಐದು ವರ್ಷಕ್ಕೊಮ್ಮೆ ಬ್ಯಾಂಕ್ ಕಳ್ಳತನವಾಗುತ್ತಿದೆ. 2014ರಲ್ಲಿ ಅರಕೆರೆ ಬಳಿಯ ಕರ್ನಾಟಕ ಬ್ಯಾಂಕ್‌ನಲ್ಲಿ ಕಳ್ಳತನ ನಡೆದಿತ್ತು. 2019ರಲ್ಲಿ ಅದೇ ಬ್ಯಾಂಕ್ ಮತ್ತೆ ಕಳ್ಳತನ ಮಾಡಿ 2 ಕೋಟಿ ರೂ. ಮೌಲ್ಯದ ನಗದು ಚಿನ್ನಾಭರಣ ಕಳವು ಮಾಡಲಾಗಿತ್ತು. ಈಗ 2024 ರಲ್ಲಿ ನ್ಯಾಮತಿಯಲ್ಲಿ ಎಸ್‌ಬಿಐ ಬ್ಯಾಂಕ್ ಕಳ್ಳತನ ನಡೆದಿದೆ.