ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ 2025ರ (Bihar Election 2025) ಸ್ಪಷ್ಟ ಫಲಿತಾಂಶ ಪ್ರಕಟವಾಗುತ್ತಿದೆ. ಆದ್ರೆ ಫಲಿತಾಂಶ ಅಧಿಕೃತ ಘೋಷಣೆಗೂ ಮುನ್ನವೇ ಬಿಹಾರದ ಬಾಸ್ ಯಾರಾಗ್ತಾರೆ ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ಅಮಿತ್ ಶಾ (Amit shah) ಭವಿಷ್ಯದಂತೆ ಎನ್‌ಡಿಎ ಪ್ರಚಂಡ ಬಹುಮತದತ್ತ ದಾಪುಗಾಲಿಟ್ಟಿದೆ. ಎಕ್ಸಿಟ್ ಪೋಲ್ ಕೊಟ್ಟ ಫಲಿತಾಂಶದಂತೆ, ಬಿಜೆಪಿ – ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ನಿರಾಯಾಸವಾಗಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, 10ನೇ ಬಾರಗೆ ಸಿಎಂ ಪಟ್ಟದ ಮೇಲೆ ನಿತೀಶ್ ಕುಮಾರ್ ಕಣ್ಣಿಟ್ಟಿದ್ದಾರೆ. ಆದ್ರೆ ಇದಕ್ಕೆ ಬಿಜೆಪಿ ಮೈತ್ರಿ ಕೂಟ ಇದನ್ನ ಒಪ್ಪಿಕೊಳ್ಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ಗೇಮ್ ಚೇಂಜರ್ ಗ್ಯಾರಂಟಿ
ಬಿಹಾರ ಚುನಾವಣಾ ಫಲಿತಾಂಶ ಸಂಪೂರ್ಣ ಎನ್‌ಡಿಎ (NDA) ನತ್ತ ವಾಲುವುದಕ್ಕೆ ಮಹಿಳೆಯರಿಗೆ ಘೋಷಣೆ ಮಾಡಿದ್ದ 10,000 ರೂ. ಗ್ಯಾರಂಟಿ ಯೋಜನೆಯೇ ಪ್ರಮುಖ ಗೇಮ್ ಚೇಂಜರ್ ಅಂತ ರಾಜಕೀಯ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಕಳೆದ ಆಗಸ್ಟ್ 29ರಂದು ಮಹಿಳಾ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ, 1.5 ಕೋಟಿ ಮಹಿಳಾ ಮತದಾರರ ಖಾತೆಗೆ ಚುನಾವಣೆಗೂ ಮೊದಲೇ 10,000 ರೂ. ವರ್ಗಾವಣೆ ಮಾಡಿದ್ದರು. ಅನೇಕ ಉದ್ಯೋಗಸ್ಥ ಮಹಿಳೆಯರು ಇದರ ಪ್ರಯೋಜನ ಪಡೆದರು. ಅಲ್ಲದೇ ಬಿಹಾರದಲ್ಲಿ ಒಟ್ಟು 7.43 ಕೋಟಿ ಮತದಾರರ ಪೈಕಿ 3.50 ಕೋಟಿ ಮಹಿಳಾ ಮತದಾರರು ಇದ್ದು, ಶೇ.71ಕ್ಕೂ ಹೆಚ್ಚು ಮಹಿಳೆಯರು ಮತ ಚಲಾಯಿಸಿದ್ದಾರೆ. ಇದು ಎನ್‌ಡಿಎ ಗೆಲುವಿಗೆ ಪ್ರಮುಖ ತಿರುವು ಅಂತ ವಿಶ್ಲೇಷಣೆ ಮಾಡಲಾಗಿದೆ.
PTI INFOGRAPHICS | Bihar Election Results 2025: Trends/results updated at 3:12 pm#BiharElectionsWithPTI #BiharResultsWithPTI https://t.co/CYHX3GGEdr pic.twitter.com/Q0tbFmPbzu
— Press Trust of India (@PTI_News) November 14, 2025
10,000 ಗ್ಯಾರಂಟಿ ಯೋಜನೆಯ ಪ್ರಯೋಜನಗಳೇನು?
ಚುನಾವಣೆಗೆ ಒಂದು ತಿಂಗಳು ಬಾಕಿಯಿರುವಾಗಲೇ ನಿತೀಶ್ ಕುಮಾರ್ ಸರ್ಕಾರ ಬಿಹಾರದ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಗೆ ಚಾಲನೆ ನೀಡಿತ್ತು. ಈ ಯೋಜನೆ ಅಡಿಯಲ್ಲಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ.ಗಳನ್ನ ವರ್ಗಾವಣೆ ಮಾಡಲಾಗಿತ್ತು. 4 ರಿಂದ 5 ಕೋಟಿ ಕುಟುಂಬಗಳಿಗೆ ಇದರಿಂದ ಸಹಕಾರವಾಯಿತು. ಅಲ್ಲದೇ ಉದ್ಯೋಗ ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಮಹಿಳೆರಿಗೆ ಹೆಚ್ಚುವರಿಯಾಗಿ 2 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲವನ್ನೂ ಘೋಷಿಸಿದ್ದರು. ಇದು ನಿತೀಶ್ ಸರ್ಕಾರದ ಮೇಲೆ ಬಹುದೊಡ್ಡ ಪರಿಣಾಮ ಬೀರಿತು.
ಎಲ್ಲಾ ಮಹಿಳೆಯರಿಗೂ ಸಿಗಲ್ಲ 10,000 ರೂ. – ಯಾರು ಅರ್ಹರು?
* ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರು ಬಿಹಾರದ ಶಾಶ್ವತ ನಿವಾಸಿಯಾಗಿರಬೇಕು.
* ಅರ್ಜಿದಾರರು ಕನಿಷ್ಠ 10+2 (2nd PUC), ಐಟಿಐ, ಪಾಲಿಟೆಕ್ನಿಕ್ ಡಿಪ್ಲೊಮಾ ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು.
* ಅರ್ಜಿದಾರರು 18 ರಿಂದ 50 ವರ್ಷಗಳ ವಯಸ್ಸಿನವರಾಗಿರಬೇಕು.
* ವ್ಯಾಪಾರ ಘಟಕವು ಮಾಲೀಕತ್ವ ಅಥವಾ ಪಾಲುದಾರಿಕೆ ಸಂಸ್ಥೆಯಾಗಿರಬೇಕು.
* ತೃತೀಯ ಲಿಂಗಿಗಳೂ ಈ ಯೋಜನೆಗೆ ಅರ್ಹರು.
ಮೊದಲಿಂದಲೂ ಮಹಿಳೆಯರ ಕಡೆಗೆ ಹೆಚ್ಚಿನ ಒಲವು
ನಿತೀಶ್ ಸರ್ಕಾರ ಮಹಿಳಾ ಪರ ಯೋಜನೆಗಳನ್ನ ಘೋಷಿಸಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಮಹಿಳಾ ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್ ವಿತರಣೆ, ಮದ್ಯ ಮಾರಾಟ ನಿಷೇಧ, ವಿದ್ಯಾರ್ಥಿ ವೇತನ, ಪಂಚಾಯಿತಿ ಸ್ಥಾನಗಳಲ್ಲಿ ಶೇ.50 ಮೀಸಲಾತಿ, ಸರ್ಕಾರಿ ಉದ್ಯೋಗಗಳಲ್ಲಿ ಶೇ.50 ಮೀಸಲಾತಿ ಕೊಡುಗೆಗಳನ್ನ ಜಾರಿಗೊಳಿಸಿದ್ದಾರೆ. ಇದರಿಂದ ಸಹಜವಾಗಿಯೇ ಮಹಿಳಾ ಮತದಾರರು ಎನ್‌ಡಿಎ ಕಡೆಗೆ ವಾಲಿದ್ದಾರೆ ಎನ್ನುತ್ತಿದ್ದಾರೆ ತಜ್ಞರು.
10ನೇ ಬಾರಿಗೆ ಸಿಎಂ ಪಟ್ಟದ ಮೇಲೆ ನಿತೀಶ್ ಕಣ್ಣು!
ನಿತೀಶ್ ಕುಮಾರ್ ಈವೆರೆಗೆ 9 ಬಾರಿ ಮುಖ್ಯಮಂತ್ರಿಯಾಗಿ 20 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಇದೀಗ ಎನ್‌ಡಿಎ ಮೈತ್ರಿಕೂಟದಿಂದ ಸಿಎಂ ಆಗಿ ಅಧಿಕಾರ ಸ್ವೀಕರಿಸಲು ಉತ್ಸಾಹಿಯಾಗಿದ್ದಾರೆ. ಆದ್ರೆ ಬಿಜೆಪಿ ಹೊಸ ಮುಖಕ್ಕೆ ಮಣೆಹಾಕಲು ಎದುರು ನೋಡುತ್ತಿದೆ ಎಂದು ವರದಿಗಳು ತಿಳಿಸಿವೆ.
2000ನೇ ಇಸವಿಯ ಮಾರ್ಚ್ 3ರಂದು ನಿತೀಶ್ ಫಸ್ಟ್ ಟೈಮ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. 7 ದಿನಗಳಲ್ಲಿ ಮತ್ತೆ ರಾಜೀನಾಮೆ ನೀಡಬೇಕಾಯಿತು. ಮತ್ತೆ 2005ರ ನವೆಂಬರ್‌ನಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ನಿತೀಶ್ ಸಿಎಂ ಆದರು. 2010ರಲ್ಲಿ 3ನೇ ಬಾರಿಗೆ ಸಿಎಂ ಆದರು, ಆದ್ರೆ 2014ರಲ್ಲಿ ಬಿಜೆಪಿಯಿಂದ ಬೇರ್ಪಟ್ಟರು. 2015ರಲ್ಲಿ ಆರ್‌ಜೆಡಿ ಮೈತ್ರಿಕೂಟದ ಜೊತೆಗೂಡಿ ಗೆದ್ದು ಸಿಎಂ ಆದರು. 2017ರಲ್ಲಿ ಮಹಾ ಮೈತ್ರಿಕೋಟದಿಂದ ಬೇರ್ಪಟ್ಟು ಎನ್‌ಡಿಎ ಸೇರಿಕೊಂಡರು. 2020ರ ಚುನಾವಣೆಯಲ್ಲಿ ಮತ್ತೆ ನಿತೀಶ್ ಸಿಎಂ ಆದರು. ಆದ್ರೆ 2022ರಲ್ಲಿ ಎನ್‌ಡಿಎ ತೊರೆದು ಆರ್‌ಜೆಡಿ ಜೊತೆಗೂಡಿ ಸರ್ಕಾರ ರಚಿಸಿದ್ರು. 2024ರಲ್ಲಿ ಆರ್‌ಜೆಡಿ ಜೊತೆಗಿನ ಮೈತ್ರಿ ಕಡಿದುಕೊಂಡ ನಿತೀಶ್ ಬಿಜೆಪಿ ಮೈತ್ರಿಯೊಂದಿಗೆ 9ನೇ ಬಾರಿಗೆ ಸಿಎಂ ಆದರು.




