ಪಾಟ್ನಾ: ಜನ ಸೂರಜ್ (Jan Suraj) ಸಂಸ್ಥಾಪಕ ಪ್ರಶಾಂತ್ ಕಿಶೋರ್ (Prashant Kishor) ಅವರು ರಾಜಕೀಯ ಪಕ್ಷಗಳಿಗೆ ಚುನಾವಣಾ (Election) ಕಾರ್ಯತಂತ್ರದ ಸೇವೆಗಳಿಗಾಗಿ 100 ಕೋಟಿಗೂ ಹೆಚ್ಚು ಶುಲ್ಕ ವಿಧಿಸುತ್ತಾರೆ.
ಮುಂಬರುವ ಬಿಹಾರ ಉಪಚುನಾವಣೆಯ ಪ್ರಚಾರದಲ್ಲಿ ಪ್ರಶಾಂತ್ ಕಿಶೋರ್ ಅವರೇ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ
Advertisement
ಬೆಳಗಂಜ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಶಾಂತ್ ಕಿಶೋರ್, ಜನರು ತಮ್ಮ ಅಭಿಯಾನಗಳಿಗೆ ಹಣದ ಮೂಲದ ಬಗ್ಗೆ ಆಗಾಗ್ಗೆ ಪ್ರಶ್ನಿಸುತ್ತಾರೆ. ವಿವಿಧ ರಾಜ್ಯಗಳಲ್ಲಿ ಹತ್ತು ಸರ್ಕಾರಗಳು ನನ್ನ ಕಾರ್ಯತಂತ್ರದ ಮೇಲೆ ನಡೆಯುತ್ತಿವೆ. ನನ್ನ ಪ್ರಚಾರಕ್ಕಾಗಿ ಟೆಂಟ್‌ಗಳು ಸ್ಥಾಪಿಸಲು ನನ್ನ ಬಳಿ ಸಾಕಷ್ಟು ಹಣವಿಲ್ಲ ಎಂದು ನೀವು ಭಾವಿಸುತ್ತೀರಾ? ನಾನು ಅಷ್ಟು ದುರ್ಬಲ ಎಂದು ನೀವು ಭಾವಿಸಬೇಡಿ. ಬಿಹಾರದಲ್ಲಿ ನನ್ನಷ್ಟು ಶುಲ್ಕವನ್ನು ಯಾರೂ ಕೇಳಿಲ್ಲ. ನಾನು ಕೇವಲ ಒಂದು ಚುನಾವಣೆಯಲ್ಲಿ ಯಾರಿಗಾದರೂ ಸಲಹೆ ನೀಡಿದರೆ ನನ್ನ ಶುಲ್ಕ 100 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ಇರುತ್ತದೆ. ಮುಂದಿನ ಎರಡು ವರ್ಷಗಳವರೆಗೆ ನಾನು ಅಂತಹ ಒಂದು ಚುನಾವಣಾ ಸಲಹೆಯೊಂದಿಗೆ ನನ್ನ ಪ್ರಚಾರವನ್ನು ನಡೆಸಬಹುದು ಎಂದು ಹೇಳಿದರು.
Advertisement
Advertisement
ಬೆಳಗಂಜ್ ಅಲ್ಲದೆ, ಇಮಾಮ್‌ಗಂಜ್, ರಾಮಗಢ ಮತ್ತು ತರಾರಿ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. ಈ ವರ್ಷದ ಆರಂಭದಲ್ಲಿ ಲೋಕಸಭೆಗೆ ಆಯ್ಕೆಯಾದ ನಂತರ ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈಗ ಉಪಚುನಾವಣೆ ನಡೆಯಲಿದೆ. ಇದನ್ನೂ ಓದಿ: Mumbai | ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರನನ್ನು ಭಾರತಕ್ಕೆ ಕರೆತರಲು ತಯಾರಿ ಶುರು
Advertisement
ಪ್ರಶಾಂತ್ ಕಿಶೋರ್ ಅವರು ಭಾರತದ ಹಲವಾರು ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ರಾಜಕೀಯ ತಂತ್ರಗಾರರಾಗಿ ಕೆಲಸ ಮಾಡಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ (Narendra Modi) ಕ್ಯಾಂಪ್‍ನಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ನಂತರ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡು ಗೆಲುವಿನ ರೂವಾರಿಯಾಗಿದ್ದರು. ಈ ಕಾರಣಕ್ಕಾಗಿ ಪ್ರಶಾಂತ್ ಕಿಶೋರ್ ಅವರಿಗೆ ರಾಹುಲ್ ಗಾಂಧಿ ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿ ವಹಿಸಿದ್ದರು. ಆದರೆ ಉತ್ತರ ಪ್ರದೇಶದಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಕೆಗೆ ಸೋಲಾಗಿತ್ತು. ಮೇಲ್ವರ್ಗದ ಮತಗಳನ್ನು ಸೆಳೆಯುವ ಉದ್ದೇಶ ಮತ್ತು ಕಾಂಗ್ರೆಸ್ ಯಾವಾಗಲೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪಕ್ಷ ಎನ್ನುವ ಕಲ್ಪನೆಯಿಂದ ಹೊರಬರಲು ಪ್ರಶಾಂತ್ ಕಿಶೋರ್ ಅವರು ಈ ಬಾರಿ ಬ್ರಾಹ್ಮಣ ಸಮುದಾಯ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲು ಶೀಲಾ ದೀಕ್ಷಿತ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಸಲಹೆ ನೀಡಿದ್ದರು. ಈ ಸಲಹೆಗೆ ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು.
2014ರ ಚುನಾವಣೆಯ ವೇಳೆ ಪ್ರಶಾಂತ್ ಕಿಶೋರ್ ಸಲಹೆಯಂತೆ ಚಾಯ್‍ಪೇ ಚರ್ಚಾ ಬಿಜೆಪಿಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ಇದಾದ ಬಳಿಕ ಅಮಿತ್ ಶಾ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಪ್ರಶಾಂತ್ ಕಿಶೋರ್ ಬಿಜೆಪಿ ಪಾಳೆಯವನ್ನು ತೊರೆದಿದ್ದರು. ಬಿಹಾರದಲ್ಲಿ ಮಹಾಘಟ್‍ಬಂಧನ್ ಮೈತ್ರಿಕೂಟ ನಡೆಸಿ ನಿತೀಶ್ ಕುಮಾರ್ ಅವರನ್ನು ಪ್ರಶಾಂತ್ ಕಿಶೋರ್ ಗೆಲ್ಲಿಸಿದ್ದರು. 2017ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಪ್ರಶಾಂತ್ ಕಿಶೋರ್ ತಂಡ ಕಾಂಗ್ರೆಸ್‍ನೊಂದಿಗೆ ಕೈಜೋಡಿಸಿತ್ತು. ಆಗಲೂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಎದುರಾಳಿಯನ್ನ ಮಣಿಸಿ ಅಧಿಕಾರ ಹಿಡಿದರು. ಹಲವು ವರ್ಷಗಳಿಂದ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದ ಕಾಂಗ್ರೆಸ್‍ಗೆ ಈ ಗೆಲುವು ಸಮಾಧಾನ ತಂದುಕೊಟ್ಟಿತ್ತು. 2019 ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಗೆ ಯಶಸ್ಸು ಸಿಕ್ಕಿತ್ತು. ಚಂದ್ರಬಾಬು ನಾಯ್ಡು ಅವರನ್ನು ಸೋಲಿಸಿ ವೈಎಸ್‌ಆರ್ ಕಾಂಗ್ರೆಸ್‌ನ ಜಗನ್ ಅಧಿಕಾರಕ್ಕೆ ಏರಿದ್ದರು.
2018ರಲ್ಲಿ ಜೆಡಿಯು ಸೇರಿದ್ದ ಪ್ರಶಾಂತ್ ಕಿಶೋರ್ 2022 ರಲ್ಲಿ ಜನ ಸೂರಜ್ ಹೆಸರಿನಲ್ಲಿ ಬಿಹಾರದಲ್ಲಿ ಪಕ್ಷವನ್ನು ಸ್ಥಾಪಿಸಿದ್ದರು.