ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದು ಬಸ್ ಶೆಲ್ಟರ್ ನಿರ್ಮಾಣ ಮಾಡಲು ಬರೋಬ್ಬರಿ ಒಂದು ಕೋಟಿ ರೂ. ಖರ್ಚು ಮಾಡಲಾಗಿದೆ. ಇಷ್ಟೊಂದು ಖರ್ಚು ಮಾಡಿ ಬಸ್ ನಿಲ್ದಾಣದ ಮಾಡಿರುವುದು ಬೆಂಗಳೂರಿನಲ್ಲಿ ಇದೇ ಮೊದಲಾಗಿದೆ.
ಹೌದು. ಬೆಂಗಳೂರಿನ ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರದ ಮಾರಪ್ಪನಪಾಳ್ಯ ವಾರ್ಡ್‍ನಲ್ಲಿ ಬರೋಬ್ಬರಿ ಒಂದು ಕೋಟಿ ರೂ. ಖರ್ಚು ಮಾಡಿ ಬಸ್ ನಿಲ್ದಾಣವನ್ನು ನಿರ್ಮಿಸಿದ್ದಾರೆ. ಒಂದು ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿರುವ ಈ `ಸುವರ್ಣ ಕರ್ನಾಟಕ ಬಸ್ ನಿಲ್ದಾಣ’ದಲ್ಲಿ ಬಸ್‍ಗಳ ನಿಲುಗಡೆಯೇ ಇಲ್ಲ.
ಸುವರ್ಣ ಕರ್ನಾಟಕ ಬಸ್ ನಿಲ್ದಾಣದಿಂದ 100 ಮೀಟರ್ ದೂರದಲ್ಲಿ ಡಿವಿಎಸ್ ಸಂಸದರ ನಿಧಿಯಿಂದ ಕಟ್ಟಿರುವ ಬಸ್ ಶೆಲ್ಟರ್ ಇದೆ. ಹೀಗಿರುವಾಗ ಕಾರ್ಪೊರೇಟರ್ ಮಹದೇವ್ ತಮ್ಮ ವಾರ್ಡ್‍ನಲ್ಲಿ ಒಂದು ಕೋಟಿ ರೂ. ಖರ್ಚು ಮಾಡಿ ಬಸ್ ನಿಲ್ದಾಣ ಕಟ್ಟಿರುವುದು ಹಾಸಾಸ್ಪದವಾಗಿದೆ. ಕೋಟಿ ಬಸ್ ನಿಲ್ದಾಣದ ಎರಡೂ ಬದಿಯಲ್ಲೂ ಬೃಹತ್ ಅರಳಿಮರಗಳಿದ್ದು, ಈ ಮರದ ಬೇರಿನಿಂದ ಬಸ್ ನಿಲ್ದಾಣಕ್ಕೆ ಹಾನಿ ಖಚಿತವೆಂದು ಹೇಳಲಾಗುತ್ತಿದೆ. ಹೀಗಿರುವಾಗ ಜನರ ತೆರಿಗೆ ದುಡ್ಡಿನಿಂದ ಒಂದು ಕೋಟಿ ಖರ್ಚು ಮಾಡಿ ಬಸ್ ನಿಲ್ದಾಣ ಕಟ್ಟಬೇಕಿತ್ತಾ ಎಂಬ ಪ್ರಶ್ನೆ ಇದೀಗ ಜನರಲ್ಲಿ ಮೂಡಿದೆ.
ಸದ್ಯ ಈ ಕೋಟಿ ರೂ. ಬಸ್ ಶೆಲ್ಟರ್ ಬೆಂಗಳೂರಿನ ಮಾರಪ್ಪನಪಾಳ್ಯದಲ್ಲಿದ್ದು, ಇಲ್ಲಿ ಶಾಸಕ ಗೋಪಾಲಯ್ಯ, ಅವರ ಪತ್ನಿ ಹೇಮಲತಾ ಗೋಪಾಲಯ್ಯ ಹಾಗೂ ಕಾರ್ಪೊರೇಟರ್ ಮಹದೇವ್ ಫೋಟೋ ರಾರಾಜಿಸುತ್ತಿದೆ.