ಜೈಪುರ: 14ರ ಬಾಲಕ ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್ ಸ್ಫೋಟಕ ಶತಕದ ಜೊತೆಯಾಟ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 9 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿರುವ ಗುಜರಾತ್ ಟೈಟಾನ್ಸ್ 12 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದೆ.
ಇಲ್ಲಿನ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲಿಗೆ ಬ್ಯಾಟ್ ಬೀಸಿದ ಗುಜರಾತ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 209 ರನ್ ಕಲೆಹಾಕಿತು. ಗೆಲುವಿಗೆ 210 ರನ್‌ಗಳ ಗುರಿ ಪಡೆದ ರಾಜಸ್ಥಾನ್ 15.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಆರಂಭಿಕ ಆಟಗಾರರಾಗಿ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಅಬ್ಬರದ ಆಟವಾಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 71 ಎಸೆತಗಳಲ್ಲಿ ಸ್ಫೋಟಕ 166 ರನ್‌ಗಳ ಜೊತೆಯಾಟ ನೀಡಿತು. 14 ವರ್ಷದ ವೈಭವ್ ಕೇವಲ 35 ಬಾಲ್‌ಗಳಿಗೆ ಸೆಂಚುರಿ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಯಶಸ್ವಿ ಜೈಸ್ವಾಲ್ 40 ಬಾಲ್‌ಗಳಿಗೆ 70 ರನ್ ಗಳಿಸಿದರೇ, ನಾಯಕ ರಿಯಾನ್ ಪರಾಗ್ 15 ಎಸೆತಗಳಿಗೆ 32 ರನ್ ಗಳಿಸಿ ಅಜೇಯರಾಗಿ ಉಳಿದರು.
ಗುಜರಾತ್ ಪರ ಆರಂಭಿಕ ಆಟಗಾರರಾಗಿ ನಾಯಕ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಫೀಲ್ಡಿಗಿಳಿದು 62 ಬಾಲ್‌ಗಳಿಗೆ 93 ರನ್ ಗಳಿಸಿ ಉತ್ತಮ ಜೊತೆಯಾಟವಾಡಿದರು. ಬಳಿಕ ಸುದರ್ಶನ್ 30 ಎಸೆತಗಳಿಗೆ 39 ರನ್‌ಗಳಿಸಿ ಔಟಾದರು. ಬಳಿಕ ಜೊತೆಯಾದ ಗಿಲ್ ಹಾಗೂ ಜೋಶ್ ಬಟ್ಲರ್ 38 ಎಸೆತಗಳಿಗೆ 74 ರನ್‌ಗಳ ಕಲೆ ಹಾಕಿ ತಂಡವನ್ನು ಮುನ್ನಡೆಸಿದರು. ನಾಯಕ ಗಿಲ್ 50 ಬಾಲ್‌ಗಳಲ್ಲಿ 4 ಸಿಕ್ಸರ್ ಹಾಗೂ 5 ಫೋರ್ ಸಿಡಿಸಿ 84 ರನ್ ಗಳಿಸಿ ಶತಕದ ಹೊಸ್ತಿಲಲ್ಲಿ ವಿಕೆಟ್ ಒಪ್ಪಿಸಿದರು. ಬಟ್ಲರ್ 26 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಜೇಯರಾಗಿ ಉಳಿದರು.
ರಾಜಸ್ಥಾನ ಪರ ತೀಕ್ಷಣ 2 ವಿಕೆಟ್ ಕಿತ್ತರೆ ಜೋಫ್ರಾ ಆರ್ಚರ್ ಮತ್ತು ಸಂದೀಪ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.