ಜೆಡಿಎಸ್-ಕೈ ಮೈತ್ರಿಗೆ ಮೊದಲ ಪರೀಕ್ಷೆ – ರಾಜರಾಜೇಶ್ವರಿ ನಗರದಲ್ಲಿ ಯಾರು ರಾಜ..?

Public TV
1 Min Read
rr nagar

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಇವತ್ತು ಹೊರಬೀಳಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ವೋಟರ್ ಐಡಿ ಹಗರಣ ಹಿನ್ನೆಲೆಯಲ್ಲಿ ಮೇ 28ಕ್ಕೆ ಮತದಾನ ಮುಂದೂಡಿಕೆ ಆಗಿತ್ತು.

ಕ್ಷೇತ್ರದಲ್ಲಿದ್ದ ಒಟ್ಟು 4 ಲಕ್ಷದ 71 ಸಾವಿರದ 900 ಮತದಾರರಲ್ಲಿ ಶೇಕಡಾ 54.20 ರಷ್ಟು ಮಂದಿಯಷ್ಟೇ ಹಕ್ಕು ಚಲಾಯಿಸಿದ್ದರು. ಅಂದಹಾಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೇ ವಾರಕ್ಕೆ ಸರಿಯಾಗಿ ಮೊದಲ ವಿಧಾನಸಭಾ ಫಲಿತಾಂಶ ಹೊರಬರುತ್ತಿರುವುದು ವಿಶೇಷ.

vlcsnap 2018 05 31 06h50m44s025

ಆರ್ ಆರ್ ನಗರದಲ್ಲಿ ದೋಸ್ತಿಗಳ ನಡುವೆಯೇ ನೇರ ಸ್ಪರ್ಧೆ ಇದ್ದು, ಎರಡೂ ಪಕ್ಷಗಳು ಪ್ರತ್ಯೇಕವಾಗಿ ಪ್ರಚಾರ ಮಾಡಿವೆ. ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿ ವಿಧಾನಸೌಧಕ್ಕಷ್ಟೇ ಸೀಮಿತ ಅಂತ ಪ್ರಚಾರದ ವೇಳೆ ಘೋಷಿಸಿದ್ದರು. ಕಾಂಗ್ರೆಸ್‍ನಿಂದ ಕಣಕ್ಕಿಳಿದಿರೋ ಮುನಿರತ್ನ ಮರು ಆಯ್ಕೆಯ ನಿರೀಕ್ಷೆಯಲ್ಲಿದ್ರೆ, ಜೆಡಿಎಸ್‍ನಿಂದ ಜಿ.ಹೆಚ್.ರಾಮಚಂದ್ರಗೌಡ ಶಾಸಕರಾಗುವ ಉಮೇದಲ್ಲಿದ್ದಾರೆ. ಇವರಿಬ್ಬರ ಕಾದಾಟದಿಂದಾಗುವ ಮತ ವಿಭಜನೆಯ ಲಾಭ ಪಡೆದು ಬಿಜೆಪಿಯ ತುಳಸಿ ಮುನಿರಾಜು ವಿಜಯಿಯಾಗುವ ಲೆಕ್ಕಾಚಾರದಲ್ಲಿದ್ದಾರೆ. ಕಣದಲ್ಲಿ ಒಟ್ಟು 14 ಮಂದಿ ಅಭ್ಯರ್ಥಿಗಳಿದ್ದಾರೆ.

ಮೇ 15ರಂದು ಹೊರಬಿದ್ದಿದ್ದ 222 ಕ್ಷೇತ್ರಗಳ ಫಲಿತಾಂಶದಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 37, ಬಿಎಸ್‍ಪಿ 1, ಇಬ್ಬರು ಪಕ್ಷೇತರರು ಶಾಸಕರಾಗಿ ಆಯ್ಕೆ ಆಗಿದ್ರು. ಸದ್ಯ ಜೆಡಿಎಸ್+ಕಾಂಗ್ರೆಸ್ ಮೈತ್ರಿಕೂಟ ಇಬ್ಬರು ಪಕ್ಷೇತರರ ಸಹಾಯದೊಂದಿಗೆ ವಿಧಾನಸಭೆಯಲ್ಲಿ 118 ಶಾಸಕರ ಬಲಾಬಲ ಹೊಂದಿದೆ. ಬಹುಮತಕ್ಕೆ ಬೇಕಾಗಿರುವ ಸಂಖ್ಯೆ 111.

Share This Article
Leave a Comment

Leave a Reply

Your email address will not be published. Required fields are marked *