ಬೆಂಗಳೂರು: ಇಂದು ಬೆಳಗ್ಗೆ ನಗರದ ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗಳಿಗೆ ಠಾಣೆಗೆ ಬರಲು ಪೊಲೀಸರು ಸೂಚಿಸಿದ್ದರು. ಹೊಸ ವರ್ಷದ ದಿನದಂದೇ ಬುಲಾವ್ ಬಂದಿದ್ದಕ್ಕೆ ಅಳುಕಿನಿಂದಲೇ ಠಾಣೆಗೆ ಬಂದವರಿಗೆ ಆಶ್ಚರ್ಯ ಕಾದಿತ್ತು.
ಠಾಣೆಗೆ ಬಂದವರಿಗೆ ಅತ್ತಿಬೆಲೆ ಠಾಣೆಯ ಪೊಲೀಸರು ಒಂದೊಂದು ಪುಸ್ತಕ ಹಾಗು ಗಿಡಗಳನ್ನು ಕೊಟ್ಟು ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಅತ್ತಿಬೆಲೆ ವೃತ್ತ ನಿರೀಕ್ಷಕರಾದ ಎಲ್.ವೈ.ರಾಜೇಶ್, ಪಿಎಸ್‍ಐ ನವೀನ್ ಗಜೇಂದ್ರ ಹಾಗು ಠಾಣಾ ಸಿಬ್ಬಂದಿ ಇಂದು ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಿದರು. ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿನಿಂದ ರೌಡಿಶೀಟರ್ ಪಟ್ಟ ಕಟ್ಟಿಕೊಂಡವರನ್ನು ಹೊಸ ವರ್ಷದ ಮೊದಲ ದಿನ ಠಾಣೆಗೆ ಕರೆಯಿಸಿ ಶುಭಾಶಯ ಕೋರಿ ಎಲ್ಲರಿಗೂ ಸನ್ಮಾರ್ಗದಲ್ಲಿ ನಡೆಯುವಂತೆ ತಿಳಿಸಿ ಒಬ್ಬಒಬ್ಬರಿಗೂ ‘ಕರುಣಾಳು ಬಾ ಬೆಳಕೇ’ ಎಂಬ ಪುಸ್ತಕ ಹಾಗು ಗಿಡಗಳನ್ನು ನೀಡಿದ್ರು.
Advertisement
ಈ ಸಂದರ್ಭದಲ್ಲಿ ಸಿಪಿಐ ರಾಜೇಶ್ ಮಾತನಾಡಿ, ಈ ಹಿಂದೆ ಕಾನೂನು ಭಂಗ ಹಾಗು ಕೆಲವು ಅಪಾರಾಧ ಕೃತ್ಯಗಳಿಂದ ರೌಡಿಶೀಟರ್ ಗಳಾಗಿದ್ದು ಇವರ ಬಾಳಲ್ಲಿ ಪರಿವರ್ತನೆಯಾಗಲಿ. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಉತ್ತಮರಾಗಿ ಬಾಳಲಿ ಎಂಬ ಉದ್ದೇಶದಿಂದ ಹೊಸ ವರ್ಷದ ಮೊದಲ ದಿನ ಈ ಕೆಲಸ ಮಾಡಲಾಗಿದೆ. ಅವರಿಗೆ ಕೊಟ್ಟಿರುವ ಪ್ರತಿಯೊಂದು ಗಿಡವನ್ನು ನೋಡಿದಾಗ ಅವರು ಪರಿವರ್ತನೆಯಾಗುವುದರ ಜೊತೆಗೆ ಕೊಟ್ಟಿರುವ ಪುಸ್ತಕ ಓದಿ ಅವರ ಬಾಳಲ್ಲಿ ಬಡಲಾವಣೆ ಆಗಬೇಕು. ಈ ನಿಟ್ಟಿನಲ್ಲಿ ಉತ್ತಮವಾಗಿ ಜೀವನ ನಡೆಸಲು ಇನ್ನೂ ಹೆಚ್ಚಿನ ಸಹಕಾರ ನೀಡುವ ಭರವಸೆ ನೀಡಿ ಅವರಿಗೆ ಹೊಸ ವರ್ಷದ ಶುಭಾಶಯ ತಿಳಿಸಲಾಯಿತು ಎಂದರು.