ಬೆಂಗಳೂರು: ನಗರದ ಡಿಜೆ ಹಳ್ಳಿ ರೌಡಿ ಶೀಟರ್ ಸೂರ್ಯ ಬರ್ಬರ ಕೊಲೆ ಪ್ರಕರಣದಲ್ಲಿ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಹತ್ಯೆ ನಡೆದ ಒಂದು ವಾರದಲ್ಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಡಿ.27 ರಂದು ರೌಡಿಶೀಟರ್ ಸೂರ್ಯನನ್ನು ನಗರದ ಶಾಂಪುರ ರೈಲ್ವೇ ನಿಲ್ದಾಣದ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ರೌಡಿಶೀಟರ್ ಸೂರ್ಯ ಕಳೆದ ವರ್ಷ ಭಾವ, ರೌಡಿಯಾಗಿದ್ದ ಚಾಲ್ಸ್ ಕುಮಾರನನ್ನು ಕೊಲೆ ಮಾಡಿ ಜೈಲು ಸೇರಿದ್ದ. ಈ ಪ್ರಕರಣದಲ್ಲಿ ಕಳೆದ ವಾರವಷ್ಟೇ ಸೂರ್ಯ ಜೈಲಿನಿಂದ ಬಿಡುಗಡೆಯಾಗಿದ್ದ.
Advertisement
Advertisement
ಸೂರ್ಯ ಬಿಡುಗಡೆ ವಿಷಯ ತಿಳಿದ ಚಾಲ್ಸ್ ಕುಮಾರನ ಸಹಚರರು ಡಿ.27ರ ರಾತ್ರಿ ಎಣ್ಣೆ ಪಾರ್ಟಿ ಮಾಡಲು ಆತನನ್ನು ತಮ್ಮ ಸ್ಥಳಕ್ಕೆ ಕರೆಯಿಸಿಕೊಂಡಿದ್ದರು. ಪಾರ್ಟಿ ನಡೆದ ಬಳಿಕ ಸೂರ್ಯ ಮೇಲೆ ಮಾರಕಾಸ್ತ್ರಗಳಿಂದ 6 ಮಂದಿ ಆರೋಪಿಗಳು ಹಲ್ಲೆ ನಡೆಸಿ, ಅಲ್ಲಿಂದ ರೈಲ್ವೇ ನಿಲ್ದಾಣದವರೆಗೂ ಅಟ್ಟಾಡಿಸಿ ಕೊಂಡು ಬಂದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.
Advertisement
ಘಟನೆಯಲ್ಲಿ ರೌಡಿಶೀಟರ್ ಸೂರ್ಯ ತೀವ್ರ ಗಾಯಗೊಂಡು ನಡು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಸಹಾಯಕ್ಕೆ ಅಂಗಲಾಚುತ್ತಿದ್ದ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿತ್ತು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಡಿಜೆ ಹಳ್ಳಿ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.