ಬೆಂಗಳೂರು: ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಹಲ್ಲೆ ಪ್ರಕರಣದ ಮಾದರಿಯಲ್ಲೇ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಗೂಂಡಾಗಿರಿ ನಡೆಸಿದ ಘಟನೆ ನಡೆದಿದೆ.
ನಿವೃತ್ತ ಡಿವೈಎಸ್‍ಪಿ ಕೋನಪ್ಪ ರೆಡ್ಡಿ ಪುತ್ರ ಸುಮನ್ ಮತ್ತು ಗ್ಯಾಂಗ್ ಹೋಟೆಲಿನಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಘಟನೆ ಸೆಪ್ಟೆಂಬರ್ 8 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರೇಸ್ ಕೋರ್ಸ್ ರಸ್ತೆಯಲ್ಲಿರುವ ರಿನೈಸಾನ್ಸ್ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ.
Advertisement
Advertisement
ಏನಿದು ಪ್ರಕರಣ:
ಸೆ. 8 ರಂದು ರೆನೈಸಾನ್ಸ್ ಹೋಟೆಲಿಗೆ ಕಾರ್ತಿಕ್ ಹಾಗೂ ಯುವರಾಜ್ ಊಟಕ್ಕೆ ತೆರಳಿದ್ದರು. ಈ ವೇಳೆ ಕೈ ತೊಳೆದು ಹೊರಡುವಾಗ ಯುವರಾಜ್ ಕೈ ಸುಮನ್ ಗೆ ತಗುಲಿತ್ತು. ಯಾಕೋ ನೋಡಿಕೊಂಡು ಬರುವುದಕ್ಕೆ ಆಗಲ್ವೇನೊ ಅಂತಾ ಸುಮನ್ ಯುವರಾಜ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸುಮನ್ ಜೊತೆಯಲ್ಲಿದ್ದ ಅಶೋಕ್, ಹರಿಕೃಷ್ಣ ಹಾಗು ವಿಕ್ರಮಚೋಳ ಬಿಯರ್ ಬಾಟೆಲ್ ತಂದು ಯುವರಾಜ್ ತಲೆಗೆ ಹೊಡೆದಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಯುವರಾಜ್ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ಕೂಡಲೇ ಯುವರಾಜ್ ಸ್ನೇಹಿತ ಕಾರ್ತಿಕ್ ಆಸ್ಪತ್ರೆಗೆ ಸೇರಿಸಲು ಹೋಟೆಲ್ ನಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಆರೋಪಿಗಳು ಚಾಕು ತೋರಿಸಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಬಿಳಿ ಬಣ್ಣದ 999 ನಂಬರ್ ಪ್ಲೇಟ್ ನ ಪಾರ್ಚೂನರ್ ಕಾರ್ ನಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.
Advertisement
Advertisement
ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಯುವರಾಜ್ ನನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಗಾಯಾಳು ಯುವರಾಜ್ ಕೋಮಾಗೆ ಹೋಗಿದ್ದು ಇನ್ನೂ ಪ್ರಜ್ಞೆ ಬಂದಿಲ್ಲ ಎಂಬುದಾಗಿ ತಿಳಿದುಬಂದಿದೆ.
ಘಟನೆ ನಡೆದು 24 ದಿನವಾದ್ರೂ ಆರೋಪಿಗಳು ಪತ್ತೆಯಾಗಿಲ್ಲ. ಆರೋಪಿಗಳು ಮುಂಬೈ ಗೋವಾ ಹೀಗೆ ಸ್ಥಳ ಬದಲಾಯಿಸ್ತಿದ್ದು, ಮೊಬೈಲ್ ಬಳಸ್ತಿಲ್ಲ. ಆರೋಪಿಗಳ ಪತ್ತೆಗಾಗಿ ಲುಕ್ ಔಟ್ ನೋಟೀಸ್ ಹೊರಡಿಸಿದ್ದೇವೆ ಅಂತಾ ಪೊಲೀಸರು ಹೇಳುತ್ತಿದ್ದಾರೆ.
ಅಲ್ಲದೇ ಘಟನೆಯ ಹಿಂದೆ ಬೇರೆಯದೇ ಕೈವಾಡ ಇದೆ ಅಂತ ಪೊಲೀಸರು ಹೇಳುತ್ತಿದ್ದು, ನಿವೃತ್ತ ಡಿವೈ ಎಸ್ ಪಿ ಕೋನಪ್ಪ ರೆಡ್ಡಿ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದು, ರಾಜಕೀಯ ಒತ್ತಡ ಇದೆ ಎನ್ನಲಾಗಿದೆ. ಎಸಿಪಿ ಹಾಗು ಇನ್ಸ್‍ಪೆಕ್ಟರ್ ಮೇಲೆ ಒತ್ತಡವಿದ್ದು, ಆರೋಪಿಗಳ ಬಂಧಿಸದಂತೆ ಒತ್ತಡ ಹೇರಲಾಗ್ತಿದೆ ಅನ್ನೊ ಮಾತುಗಳು ಕೇಳಿಬರುತ್ತಿವೆ.
ಘಟನೆ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=0JpoSZr30cM