Connect with us

Bengaluru City

ಲಾಂಗ್, ಮಚ್ಚು, ಕ್ರಿಕೆಟ್ ಬ್ಯಾಟ್, ಕಬ್ಬಿಣದ ರಾಡ್ ಹಿಡಿದು ಅಲಯನ್ಸ್ ವಿವಿಗೆ ನುಗ್ಗಿದ ಗೂಂಡಾಗಳು

Published

on

ಬೆಂಗಳೂರು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಅಲಯನ್ಸ್ ವಿವಿ ಒಡೆತನಕ್ಕಾಗಿ ಸಹೋದರರ ನಡುವೆ ನಡೆಯುತ್ತಿರುವ ಕಿತ್ತಾಟ ಇದೀಗ ತಾರಕಕ್ಕೇರಿದ್ದು ಸೋಮವಾರ ಕಾಲೇಜು ಆವರಣ ಅಕ್ಷರಶಃ ಸಹ ರಣಾಂಗಣವಾಗಿ ಮಾರ್ಪಾಟಿತ್ತು.

2 ದಿನಗಳ ಹಿಂದೆ ಸುಧೀರ್ ಅಂಗುರ್ ರೌಡಿ ಪಡೆಯೊಂದಿಗೆ ಕಾಲೇಜಿನೊಳಗೆ ನುಗ್ಗಿ ಮಧುಕರ್ ಅಂಗೂರ್ ನೇಮಿಸಿದ್ದ ಸಿಬ್ಬಂದಿಗೆ ಹಾಗೂ ವಿದ್ಯಾರ್ಥಿಗಳಿಗೆ ಮನ ಬಂದಂತೆ ಥಳಿಸಿ ಹೊರ ಹಾಕಿದ್ದರು. ಇಂದು ಮಧುಕರ್ ಬೆಂಬಲಿಗರು ವಿವಿ ಆವರಣಕ್ಕೆ ನುಗ್ಗಿ ರೌಡಿಗಳಂತೆ ಬಡಿದಾಡಿಕೊಂಡಿದ್ದಾರೆ.

ಲಾಂಗ್, ಮಚ್ಚು ಮತ್ತು ದೊಣ್ಣೆಗಳು ರಾರಾಜಿಸಿ ಪರಸ್ಪರ ಆವರಣದೊಳಗೆ ಓಡಾಡಿಸಿಕೊಂಡು ಬಡಿದಾಡಿಕೊಂಡಿದ್ದಾರೆ. ಇಡೀ ವಾತಾವರಣ ಮಾರುಕಟ್ಟೆಯಂತೆಯಾಗಿತ್ತು. ಒಟ್ಟಿನಲ್ಲಿ ಇಂದು ಸಂಜೆ ಅಲಯನ್ಸ್ ವಿವಿ ಆವರಣ ರಣಾಂಗಣವಾಗಿ ಮಾರ್ಪಟ್ಟು ಇಡೀ ವಿದ್ಯಾರ್ಥಿಗಳ ಬದುಕನ್ನು ಡೋಲಾಯಮಾನವಾಗಿಸಿದೆ.

ಇಂದು ಸಂಜೆ ಕಾಲೇಜಿನಲ್ಲಿ ನಡೆದ ಗಲಾಟೆಯನ್ನು ನೋಡಿ ಡೀನ್ ಮಾರ್ಕೀಂಡೇಯಾ ಈ ದಾಂಧಲೆಗೆ ಸುಧೀರ್ ಅಂಗೂರ್ ಕಾರಣವೆಂದು ದೂರಿದ್ದಾರೆ.

ವಿವಿ ಆಡಳಿತ ಮಂಡಳಿಯವರು ಆರು ತಿಂಗಳಿಗೊಮ್ಮೆ ಕಿತ್ತಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ವಿವಿ ಆಡಳಿತ ಮಂಡಳಿಯ ಸೋದರ ಸೋದರಿಯರಾದ ಮಧುಕರ್ ಅಂಗೂರ್ ಹಾಗೂ ಶೈಲಜಾ ಚಬ್ಬಿ ಅವರು ಅಧಿಕಾರ ದಾಹದಿಂದ ಕಳೆದ ಎರಡು ವರ್ಷಗಳಿಂದ ಆರು ತಿಂಗಳಿಗೊಮ್ಮೆ ಕಿತ್ತಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ದಾರಿ ಅತಂತ್ರವಾದಂತಾಗಿದೆ.

ಕಳೆದ ಆರು ತಿಂಗಳಿಂದ ಅಲಯನ್ಸ್ ವಿವಿ ಕುಲಪತಿಯಾಗಿ ಮಧುಕರ್ ಅಂಗೂರ್ ಜವಾಬ್ದಾರಿ ತೆಗೆದುಕೊಂಡ ಮೇಲೆ ಪ್ರಶಾಂತವಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಮಧುಕರ್ ಸಹೋದರಿ ಶೈಲಜಾ ಚಬ್ಬಿ ಹಾಗೂ ಸುಧೀರ್ ಅಂಗೂರ್ ಅಕ್ರಮವಾಗಿ ವಿವಿ ಅವರಣಕ್ಕೆ ಬೌನ್ಸರ್ ಗಳನ್ನು ಕಳುಹಿಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ವಿದ್ಯಾರ್ಥಿಗಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಇಷ್ಟೆಲ್ಲ ನಡೆಯುತ್ತಿದ್ದರೂ ಇದನ್ನೆಲ್ಲ ಕಣ್ಣಾರೆ ಕಂಡರೂ ಇದನ್ನು ತಡೆಯಬೇಕಾದ ಆನೇಕಲ್ ಪೊಲೀಸರು ಕಂಡು ಕಾಣದಂತೆ ಸುಮ್ಮನೆ ಕೈಕಟ್ಟಿ ಕುಳಿತಿದ್ದಾರೆ. ಕಾಲೇಜಿನ ಕಿತ್ತಾಟದ ಬಗ್ಗೆ ತಾಲೂಕಿನವರಾದ ಗೃಹ ಸಚಿವರಿಗೂ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗಿದ್ದಾರೆ.

ವಿದ್ಯಾರ್ಥಿಗಳಿಂದ ಪ್ರತಿಭಟನೆ: ಅಲಯನ್ಸ್ ಕಾಲೇಜಿನಲ್ಲಿ ನಡೆಯುತ್ತಿರುವ ಗುಂಡಾಗಿರಿಯನ್ನು ಖಂಡಿಸಿ ಇವತ್ತು ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು ಅವರಿಗೆ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಸುಧೀರ್ ಅಂಗೂರ್ ಹಾಗೂ ಗೂಂಡಾಗಳು ಕಾಲೇಜಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಲ್ಲದೇ ಆಡಳಿತ ಮಂಡಳಿ ಬದಲಾವಣೆಯಾಗಿದ್ದು ಹೊಸದಾಗಿ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಒತ್ತಡ ಹೇರುತ್ತಿದ್ದಾರೆ. ಮಧುಕರ್ ಜಿ ಅಂಗೂರ್ ಅವರನ್ನು ಹೊರಹಾಕಿ ಆಸ್ತಿ ಹೊಡೆಯಲು ಪ್ಲಾನ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಬ್ಬನ್ ಪಾರ್ಕ್ ನಲ್ಲಿ ಸೇರಿದ್ದ ವಿದ್ಯಾರ್ಥಿಗಳು ಹಾಗು ಸಿಬ್ಬಂದಿ ವರ್ಗ ಕಾನೂನು ಕ್ರಮಕ್ಕಾಗಿ ಒತ್ತಾಯಿಸಿದ್ದರು. ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿದ್ದ ಎಲ್ಲರನ್ನು ಹೊರಗೆ ಕಳುಹಿಸಿದರು.

Click to comment

Leave a Reply

Your email address will not be published. Required fields are marked *