ಉಡುಪಿ: ತನ್ನ ಮಠದ ಪಟ್ಟದ ದೇವರನ್ನು ವಾಪಸ್ ಕೊಡದೇ ಇದ್ದರೆ ಕ್ರಿಮಿನಲ್ ಕೇಸು ಹಾಕೋದಾಗಿ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಈ ಮೂಲಕ ಕಳೆದ ಕೆಲ ತಿಂಗಳಲ್ಲಿ ನಡೆಯುತ್ತಿರುವ ಅಷ್ಟಮಠಗಳ ನಡುವಿನ ಜಟಾಪಟಿ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಯಿದೆ.
ನಂಬಿಕಸ್ತರೆಂದು ನೀಡಿದ ವಸ್ತುವನ್ನು ವಾಪಸ್ ನೀಡದೇ ಅವರ ಬಳಿಯೇ ಇಟ್ಟುಕೊಳ್ಳುವುದು ದರೋಡೆಗೆ ಸಮನಾದುದು ಎಂದಿರುವ ಶಿರೂರು ಸ್ವಾಮೀಜಿ ಪೇಜಾವರ ಸ್ವಾಮೀಜಿ ಸಹಿತ ತನ್ನನ್ನು ವಿರೋಧಿಸುತ್ತಿರುವ ಎಲ್ಲಾ ಅಷ್ಟಮಠಾಧೀಶರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
Advertisement
ಶಿರೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿಷ್ಯ ಸ್ವೀಕಾರ ನನ್ನ ತೀರ್ಮಾನಕ್ಕೆ ಬಿಟ್ಟ ವಿಚಾರ. ಪಟ್ಟದ ದೇವರನ್ನು ವಾಪಸ್ ನೀಡದೇ ಇತರ ಮಠಾಧೀಶರು ದ್ರೋಹ ಮಾಡಿದ್ದಾರೆ ಎಂಬ ಅಭಿಪ್ರಾಯದಲ್ಲಿದ್ದಾರೆ. ತಾನು ದಿನಂಪ್ರತಿ ಪೂಜೆ ಮಾಡುವ ಪಟ್ಟದ ದೇವರನ್ನು ವಾಪಸ್ ಕೊಡಿ ಎಂದು ಹೇಳಿದ್ದಾರೆ.
Advertisement
ಏನಿದು ಜಟಾಪಟಿ?
ಅಷ್ಟಮಠಾಧೀಶರು ಪಾಲಿಸಬೇಕಾದ ನಿಯಮಗಳನ್ನು ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಪಾಲಿಸುತ್ತಿಲ್ಲ ಎಂಬ ಬಗ್ಗೆ ಕೆಲ ತಿಂಗಳ ಹಿಂದೆ ಆರೋಪ ಕೇಳಿಬಂದಿತ್ತು. ಇದೇ ಸಂದರ್ಭದಲ್ಲಿ ಶಿರೂರು ಸ್ವಾಮೀಜಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಸಂದರ್ಭ ದಿನನಿತ್ಯ ಪೂಜೆ ಮಾಡುವ ಪಟ್ಟದ ದೇವರನ್ನು ಕೃಷ್ಣಮಠದಲ್ಲಿ ಇರಿಸಿದ್ದರು. ಅಂದಿನಿಂದ ಅದಮಾರು ಸ್ವಾಮೀಜಿ ಪಟ್ಟದ ದೇವರಿಗೆ ಪೂಜೆ ನಡೆಸುತ್ತಿದ್ದಾರೆ. ಈಗ ಪಟ್ಟದ ದೇವರನ್ನು ವಾಪಸ್ ನೀಡಲು ಅಷ್ಟಮಠಾಧೀಶರು ನಿರಾಕರಿಸುತ್ತಿದ್ದಾರೆ. ಅಂದಿನಿಂದ ಈ ಜಟಾಪಟಿ ನಡೆಯುತ್ತಿದೆ. ಇದನ್ನೂ ಓದಿ: ಅಷ್ಟಮಠಗಳ ಶ್ರೀಗಳ ವಿರುದ್ಧ ಕೇವಿಯಟ್ ತಂದ ಶೀರೂರು ಶ್ರೀ
Advertisement
ಶ್ರೀಗಳೇ ಮಠದ ಪಟ್ಟದ ದೇವರಿಗೆ ಪೂಜೆ ಮಾಡಬೇಕೆಂಬ ನಿಯಮವಿದೆ. ಒಂದು ವೇಳೆ ಈ ಅವಧಿಯಲ್ಲಿ ಶ್ರೀಗಳು ಅನಾರೋಗ್ಯಕ್ಕೆ ಒಳಗಾದರೆ ಅವರ ಶಿಷ್ಯ ಪೂಜೆ ಮಾಡಬೇಕಾಗುತ್ತದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶೀರೂರು ಸ್ವಾಮೀಜಿಯ ಶಿಷ್ಯ ಸ್ವೀಕಾರದ ಕುರಿತು ಚರ್ಚೆ ಆರಂಭವಾಗಿತ್ತು. ಇದೀಗ ಮತ್ತೆ ಚರ್ಚೆ ಆರಂಭವಾಗಿದೆ. ಶಿರೂರು ಸ್ವಾಮೀಜಿ ಕಡ್ಡಾಯವಾಗಿ ಶಿಷ್ಯ ಸ್ವೀಕಾರ ಮಾಡಬೇಕೆಂಬ ವಿಚಾರಕ್ಕೆ ಮತ್ತೆ ಜೀವ ಬಂದಿದೆ.
Advertisement
ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಶಿರೂರು ಸ್ವಾಮೀಜಿ ಮುಂದಾದಾಗ ಸಾಕಷ್ಟು ಗೊಂದಲ ಶುರುವಾಗಿತ್ತು. ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿಕೊಂಡ ವೇಳೆ ಬಹಿರಂಗಗೊಂಡ ವಿಡಿಯೋ ತುಣುಕು ಶಿರೂರು ಸ್ವಾಮೀಜಿಯ ವಿರುದ್ಧ ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಅವರ ಹೇಳಿಕೆಗಳು ಮಾಧ್ಯಮದಲ್ಲಿ ಪ್ರಕಟವಾದ ಕಾರಣ ಧಾರ್ಮಿಕವಾಗಿ ಬಹಳ ಚರ್ಚೆಗಳಾಗಿದೆ. ಈ ಕಾರಣಗಳಿಗೆ ಶಿರೂರು ಸ್ವಾಮಿಜಿ ವಿರುದ್ಧ ಇತರ ಮಠಾಧೀಶರು ತಿರುಗಿಬಿದ್ದಿದ್ದರು.