ದುನಿಯಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಲೂಸ್ ಮಾದ ಯೋಗಿ (Loose Mada Yogeesh) ಇದೀಗ ಐವತ್ತನೇ ಸಿನಿಮಾ ಪೂರೈಸಿದ್ದಾರೆ. ಮೊನ್ನೆಯಷ್ಟೇ ಅವರ 50ನೇ ಸಿನಿಮಾದ ಮುಹೂರ್ತ ಕೂಡ ಆಗಿದೆ. ಈ ಚಿತ್ರಕ್ಕೆ ರೋಸಿ ಎಂದು ಹೆಸರಿಡಲಾಗಿತ್ತು. ಈ ಟೈಟಲ್ ಸಮಸ್ಯೆಯೊಂದನ್ನು ಸೃಷ್ಟಿ ಮಾಡಿದೆ.
ಈಗಾಗಲೇ ಇದೇ ಹೆಸರಿನಲ್ಲೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಘೋಷಣೆ ಮಾಡಿದ್ದಾರೆ. ಯೋಗಿಗೆ ರೋಸಿ ಸಿನಿಮಾ ಐವತ್ತನೇ ಚಿತ್ರವಾದರೆ, ಅರ್ಜುನ್ ಅವರಿಗೆ ಮೊದಲನೇ ಸಿನಿಮಾ. ಹಾಗಾಗಿ ಇಬ್ಬರಿಗೂ ಈ ಟೈಟಲ್ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಹೀಗಾಗಿ ಇಬ್ಬರೂ ಟೈಟಲ್ ಬಿಟ್ಟು ಕೊಡಲು ತಯಾರಿಲ್ಲ. ಹಾಗಾಗಿ ಅನಿವಾರ್ಯವಾಗಿ ಶಿವರಾಜ್ ಕುಮಾರ್ ಮಧ್ಯ ಪ್ರವೇಶ ಮಾಡಬೇಕಾಗಿ ಬಂದಿದೆ. ಇದನ್ನೂ ಓದಿ:ಲಿಫ್ಟ್‌ನಲ್ಲಿ ಪತಿ ನಿಕ್ ಜೋನಸ್ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾನ್ಸ್
ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾದಲ್ಲಿ ಶಿವರಾಜ್ ಕುಮಾರ್ (Shivaraj Kumar)ಕೂಡ ನಾಯಕನಾಗಿ ನಟಿಸುತ್ತಿದ್ದಾರೆ. ಹಾಗಾಗಿ ಶಿವಣ್ಣನಿಗೆ ಯೋಗಿ ಮನವಿ ಮಾಡಿಕೊಂಡಿದ್ದಾರೆ. ಇದು ತಮ್ಮ ಐವತ್ತನೇ ಚಿತ್ರವಾಗಿದ್ದರಿಂದ ಟೀಮ್ ಜೊತೆ ಮಾತಾಡಿ ರೋಸಿ ಟೈಟಲ್ ಅನ್ನು ನಮಗೆ ಬಿಟ್ಟು ಕೊಡಿ ಎಂದು ಕೇಳಿಕೊಂಡಿದ್ದಾರೆ. ಟೀಮ್ ಜೊತೆ ಮಾತನಾಡುವುದಾಗಿ ಶಿವರಾಜ್ ಕುಮಾರ್ ಹೇಳಿದ್ದಾರಂತೆ.
ಅರ್ಜುನ್ ಜನ್ಯ (Arjun Janya) ಚೊಚ್ಚಲ ನಿರ್ದೇಶನದ, ಸೂರಜ್ ಪ್ರೊಡಕ್ಷನ್ಸ್ ಲಾಂಛನದ ಮೂಲಕ ‘ರೋಸಿ 45’ (Rosy 45) ಶೀರ್ಷಿಕೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳೀಯಲ್ಲಿ ನೋಂದಾಯಿಸಲಾಗಿದೆ. ಈಗ ಯೋಗಿ ನಟನೆಯ ಡಿ.ವೈ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ ‘ರೋಸಿ’ ಎಂದು ಶೀರ್ಷಿಕೆ ಇಡಲಾಗಿದೆ. ಈ ವಿಷಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ತರಲಾಗಿತ್ತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮೊದಲು ಶೀರ್ಷಿಕೆ ನೋಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ವಾಣಿಜ್ಯ ಮಂಡಳಿ ಹೇಳಿದೆ. ಹಾಗಾಗಿ ಸೂರಜ್ ಪ್ರೊಡಕ್ಷನ್ಸ್ ಗೆ ರೋಸಿ 45(Rosy 45) ಶೀರ್ಷಿಕೆ ಸೇರಿದೆ. ಇನ್ನು ಮುಂದೆ ಯಾರು ಕೂಡ ‘ರೋಸಿ’ ಶೀರ್ಷಿಕೆ ಬಳಸುವ ಹಾಗಿಲ್ಲ ಹಾಗೂ ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ನಂಬರ್ ಗಳನ್ನಾಗಲಿ ಸೇರಿಸಿಕೊಂಡು ಸಹ ಬಳಸುವ ಹಾಗಿಲ್ಲ ಎಂದು ರೋಸಿ 45 ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ (Ramesh Reddy) ಹಾಗೂ ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ. ಮುಂದೇನಾಗತ್ತೋ ಕಾದು ನೋಡಬೇಕು.