ಬೆಂಗಳೂರು: ಶಿವಾಜಿನಗರ ಶಾಸಕ ರೋಷನ್ ಬೇಗ್ ನನ್ನ ಬಳಿ 400 ಕೋಟಿ ಹಣವನ್ನು ಪಡೆದಿದ್ದಾರೆ. ಹಣ ವಾಪಸ್ ಕೇಳಲು ಹೋದರೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಬೆಂಗಳೂರಿನ ಐಎಂಎ ಜ್ಯೂವೆಲ್ಲರ್ಸ್ ಎಂಡಿ ಮನ್ಸೂರ್ ಆರೋಪಿಸಿದ್ದಾರೆ.
ಬರೋಬ್ಬರಿ 2 ಸಾವಿರ ಕೋಟಿ ರೂ. ವಹಿವಾಟನ್ನು ಮನ್ಸೂರ್ ಹೊಂದಿದ್ದಾರೆ. ಹಾಗೆಯೇ ಕಳೆದ 4 ದಿನಗಳಿಂದ ಕಚೇರಿ ಬಾಗಿಲು ಹಾಕಿದ್ದ ಮನ್ಸೂರ್ ಸೋಮವಾರ ಕಚೇರಿ ಬಾಗಿಲು ತೆರೆಯುವುದಾಗಿ ತನ್ನ ಬಳಿ ಹಣ ಹೂಡಿಕೆ ಮಾಡಿದವರಿಗೆ ಭರವಸೆ ನೀಡಿದ್ದರು. ಆದರೆ ಸೋಮವಾರ ಕಚೇರಿ ತೆರೆಯುವ ಮುನ್ನ ಆಡಿಯೋ ಬಿಡುಗಡೆ ಮಾಡಿ ನಾಪತ್ತೆಯಾಗಿದ್ದಾರೆ. ಸೋಮವಾರ ನಮ್ಮ ಹೂಡಿಕೆ ಹಣ ಸಿಗುತ್ತೆ ಎಂದು ನಂಬಿದ್ದ ಸಾರ್ವಜನಿಕರು ಕಂಗೆಟ್ಟು, ಕಚೇರಿ ಮುಂದೆಯೇ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಹಣ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ಈ ಆಡಿಯೋ ಸಿಕ್ಕ ಕೂಡಲೇ ಪೊಲೀಸರು ಮನ್ಸೂರ್ ಮನೆ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಆದರೆ ಕಚೇರಿ, ಮನೆಗೆ ಬೀಗ ಜಡಿದು ಮನ್ಸೂರ್ ನಾಪತ್ತೆ ಆಗಿದ್ದು, ನಿಜವಾಗಲೂ ಮನ್ಸೂರ್ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಹೀಗಾಗಿ ಪೊಲೀಸರು ಮಾನ್ಸೂರ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Advertisement
Advertisement
ಆಡಿಯೋದಲ್ಲಿ ಏನಿದೆ?
ಐಎಂಎ ಅಲ್ಲಿ ಹಣ ಹೂಡಿಕೆ ಮಾಡಲು ನಾನು ಜನರ ಬಳಿ ಹಣ ಸಂಗ್ರಹ ಮಾಡಿದ್ದೆ. ಬಳಿಕ ಅದನ್ನು ರೋಷನ್ ಬೇಗ್‍ಗೆ ನೀಡಿದ್ದೆ. ಉದ್ಯಮಿಯೊಬ್ಬರಿಗೆ 500 ಕೋಟಿ ಹಾಗೂ ರೋಷನ್ ಬೇಗ್ ಅವರಿಗೆ 400 ಕೋಟಿ ರೂ. ಸಾಲದ ರೀತಿಯಲ್ಲಿ ಹಣ ನೀಡಿದ್ದೆ. ಆದರೆ ಹಣ ವಾಪಸ್ ಕೊಡುವ ಮನಸ್ಸು ಮಾಡಲೇ ಇಲ್ಲ. ಹಣ ಕೇಳಲು ಹೋದರೆ ಹೆಂಡತಿ ಮಕ್ಕಳನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಆ ಭಯಕ್ಕೆ ನಾನು ನನ್ನ ಹೆಂಡತಿ ಮಕ್ಕಳನ್ನು ಹಳ್ಳಿಯೊಂದರಲ್ಲಿ ಬಚ್ಚಿಟ್ಟಿದ್ದೆ. ಆದರೆ ನಾನು ಈಗ ಬದುಕಲು ಸಾಧ್ಯ ಆಗುತ್ತಿಲ್ಲ. ನಾನು ಸಾವನ್ನಪ್ಪುತ್ತೇನೆ ಎಂದು ಆಡಿಯೋ ಕ್ಲಿಪ್ಪಿಂಗ್ ಬಿಡುಗಡೆ ಮಾಡಿ ನಾಪತ್ತೆಯಾಗಿದ್ದಾರೆ.
ಈ ಸಂಬಂಧ ಡಿಸಿಪಿ ರಾಹುಲ್ ಕುಮಾರ್ ಪ್ರತಿಕ್ರಿಯಿಸಿ, ಐಎಂಎ ಜುವೆಲ್ಲರಿ ಮಾಲೀಕ ಮನ್ಸೂರ್ ಆಡಿಯೋ ವೈರಲ್ ಆಗಿದೆ. ಮನ್ಸೂರ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಹೂಡಿಕೆ ಮಾಡಿದ ಜನರು ಜುವೆಲ್ಲರಿ ಶಾಪ್ ಮುಂದೆ ಸೇರಿ ಪ್ರತಿಭಟನೆ ಮಾಡುತ್ತಿದ್ದಾರೆ. ಹಣ ಕಳೆದುಕೊಂಡವರು ದೂರು ನೀಡಿದರೆ ತನಿಖೆ ಮಾಡುತ್ತೇವೆ. ಮನ್ಸೂರ್ ಫೋನ್ ಸ್ವಿಚ್ ಆಫ್ ಆಗಿದ್ದು, ಕುಟುಂಬ ಸದಸ್ಯರೂ ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಮನ್ಸೂರ್ ಮೊಬೈಲ್ ಸ್ವಿಚ್ ಆಫ್ ಆಗಿರುವ ಹಿನ್ನೆಲೆ ಟವರ್ ಲೊಕೇಷನ್ ಮೂಲಕ ಮನ್ಸೂರ್‍ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮನ್ಸೂರ್ ದೇಶ ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಮಾಹಿತಿ ನೀಡಿ, ಎಮಿಗ್ರೇಷನ್‍ನಲ್ಲೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.