ಸಿದ್ದರಾಮಯ್ಯ ಒತ್ತಡವೇ ಅಮಾನತಿಗೆ ಕಾರಣವಿರಬಹುದು: ರೋಷನ್ ಬೇಗ್

Public TV
2 Min Read
roshan baig 1

-ಸತ್ಯ ಹೇಳಿದರೆ ಅವರಿಗೆ ತಡೆದುಕೊಳ್ಳೋಕೆ ಆಗಲ್ವಾ?
– ಕಾಂಗ್ರೆಸ್‍ನಲ್ಲೇ ಇರುತ್ತೇನೆ

ಬೆಂಗಳೂರು: ನಾನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಶಿಸ್ತಿನ ಸಿಪಾಯಿಯಾಗಿದ್ದೇನೆ. ಸಿದ್ದರಾಮಯ್ಯ ಕಾಂಗ್ರೆಸ್ಸಿನ ಶಿಸ್ತಿನ ಸಿಪಾಯಿ ಅಲ್ಲ. ಸಿದ್ದರಾಮಯ್ಯ ಒತ್ತಡವೂ ನನ್ನ ಅಮಾನತಿಗೆ ಕಾರಣವಿರಬಹುದು ಎಂದು ಶಿವಾಜಿನಗರ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

roshan baig 2

ಕಾಂಗ್ರೆಸ್ ಪಕ್ಷದಿಂದ ಅನಾನತುಗೊಂಡ ವಿಚಾರವಾಗಿ ಶಾಸಕ ರೋಷನ್ ಬೇಗ್ ತಮ್ಮ ಫ್ರೇಜರ್ ಟೌನ್ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ, ನಾನು ಇವತ್ತು ಪಕ್ಷದ ಬಗ್ಗೆ ಮಾತ್ರ ಮಾತಾನಾಡುತ್ತೇನೆ. ಮಂಗಳವಾರ ರಾತ್ರಿ ನನ್ನನ್ನು ಪಕ್ಷದಿಂದ ಅಮಾನತು ಮಾಡಿರುವ ಸುದ್ದಿ ತಿಳಿಯಿತು. ಸಿದ್ದರಾಮಯ್ಯ ಒತ್ತಡವೂ ನನ್ನ ಅಮಾನತಿಗೆ ಕಾರಣವಿರಬಹುದು. ನಾನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಸಿಪಾಯಿ. ಸಿದ್ದರಾಮಯ್ಯ ಕಾಂಗ್ರೆಸ್ಸಿನ ಸಿಪಾಯಿ ಅಲ್ಲ. ಅವರೇ ಕಾಂಗ್ರೆಸ್ಸನ್ನು ಈ ದುರ್ಗತಿಗೆ ತಂದಿದ್ದಾರೆ. ನಾನು ಸತ್ಯ ಹೇಳಿದ್ದೀನಿ. ಸತ್ಯ ಹೇಳೋದು ಅಪರಾಧಾನಾ? ನಾನು ಸತ್ಯ ಹೇಳಿದರೆ ಅವರಿಗೆ ತಡ್ಕೊಳ್ಳೋಕಾಗಲ್ಲವಾ? ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

roshan baig 3

ನಾನು ರಾಹುಲ್ ಗಾಂಧಿಯವರನ್ನು ಟೀಕಿಸಿಲ್ಲ. ನಾನು ಈ ಕ್ಷಣದವರೆಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿಯೇ ಇದ್ದೇನೆ. ನಾನು ರಾಜ್ಯ ನಾಯಕರ ಬಗ್ಗೆ ಸತ್ಯ ಮಾತನಾಡಿದ್ದೀನಿ. ಹಿರಿಯ ಕಾಂಗ್ರೆಸ್ ನಾಯಕರಾದ ಮುನಿಯಪ್ಪ, ರಾಮಲಿಂಗಾರೆಡ್ಡಿ ಜೊತೆ ಚರ್ಚಿಸಿ ಮುಂದಿನ ನಿರ್ಣಯ ತೆಗೆದುಕೊಳ್ಳುತ್ತೇನೆ. ಕಾಂಗ್ರೆಸ್ ಕಾರ್ಯಕರ್ತರ ಮನದ ಅಭಿಪ್ರಾಯವನ್ನು ನಾನು ಮಾತಾಡಿದ್ದು ಅಷ್ಟೇ. ರಮೇಶ್ ಜಾರಕಿಹೊಳಿ, ಕೆ.ಎನ್ ರಾಜಣ್ಣ ಅವರ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು. ನಾನು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ಚಿಂತನೆ ಇಲ್ಲ. ಅಮಾನತುಗೊಂಡಿರುವ ವಿಚಾರವನ್ನು ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ರಾಮಲಿಂಗಾರೆಡ್ಡಿ, ಎಚ್.ಕೆ ಪಾಟೀಲ್ ಅವರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.

CONGRESS SIDDARAMAIAH

ರಾಜ್ಯದಲ್ಲಿ ಕಾಂಗ್ರೆಸ್ ಒಂದೇ ಒಂದು ಸೀಟು ಗೆದ್ದಿದೆ. ಮುನಿಯಪ್ಪರನ್ನ ಸೋಲಿಸುತ್ತೇವೆ ಎಂದು ಬಹಿರಂಗವಾಗಿ ಕೆಲವರು ಹೇಳಿದ್ದರು. ಅವರ ವಿರುದ್ಧ ಯಾಕೆ ಪಕ್ಷ ಕ್ರಮ ತೆಗೆದುಕೊಂಡಿಲ್ಲ. ಮಂಡ್ಯದಲ್ಲಿ ಸುಮಲತಾ ಅವರ ಪರ ಕೈ ಪಕ್ಷದವರು ಕೆಲಸ ಮಾಡಿದ್ದರು. ಮಂಡ್ಯದ ಕಾಂಗ್ರೆಸಿಗರ ವಿರುದ್ಧ ಯಾಕೆ ಕ್ರಮ ಇಲ್ಲ ಎಂದು ಹರಿಹಾಯ್ದರು.

ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ನಮ್ಮನ್ನೆಲ್ಲ ಕರೆದು ಚರ್ಚೆ ಮಾಡಬೇಕಿತ್ತು. ಕ್ಲೋಸ್ಡ್ ಡೋರ್ ನಲ್ಲಿ ಗುಸು ಗುಸು ಎಂದು ಪಕ್ಷದ ಬಗ್ಗೆ ಚರ್ಚೆ ಮಾಡಕ್ಕಾಗಲ್ಲ. ಎಲ್ಲರೂ ಒಟ್ಟಾಗಿ ಚರ್ಚೆ ಮಾಡಬೇಕು. ನಾನು ಪಕ್ಷದ ರಾಜ್ಯ ನಾಯಕರ ಬಗ್ಗೆ ಮಾತಾಡಿದ್ದಕ್ಕೆ ಹಲವರಿಂದ ಬೆಂಬಲ ಬಂತು. ತುಮಕೂರಲ್ಲಿ ಮುದ್ದಹನುಮೇಗೌಡರನ್ನು ಬಲಿಕೊಟ್ಟರು. ಅವರೇನು ತಪ್ಪು ಮಾಡಿದ್ದರು? ಮೈತ್ರಿ ಎಂದು ಹೇಳುತ್ತಲೇ ಮಾಜಿ ಪ್ರಧಾನಿ ದೇವೇಗೌಡರನ್ನೂ ಸೋಲಿಸಿದ್ರಲ್ಲ ಎಂದು ಕೆಲ ಕೈ ನಾಯಕರ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

HDD SUMALATHA

ನಂತರ ಐಎಂಎ ಪ್ರಕರಣದ ಬಗ್ಗೆ ನಾನು ಮಾತಾಡಲ್ಲ. ಅದರ ತನಿಖೆ ನಡೀತಿದೆ ಎಂದು ಹೇಳಿದರು. ಇಂದು ರಾಹುಲ್ ಗಾಂಧಿ ಅವರ ಜನ್ಮದಿನ. ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತೇನೆ ಅವರೇ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಬೇಕು ಎನ್ನುತ್ತಾ ನಾನು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದು ತಮ್ಮ ನಿರ್ಧಾರವನ್ನು ತಿಳಿಸಿದರು.

ಅವರೊಂದಿಗೆ ಗುಣಶೇಖರ್, ನೇತ್ರಾವತಿ ಕೃಷ್ಣೇಗೌಡ, ಮುರುಗಾ ಅವರು ಸೇರಿ ನಾಲ್ವರು ಕಾರ್ಪೊರೇಟರ್ ಗಳು ಸಾಥ್ ನೀಡಿದ್ದರು

Share This Article
Leave a Comment

Leave a Reply

Your email address will not be published. Required fields are marked *