ಬೆಂಗಳೂರು: ಉಪಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ಸ್ಪರ್ಧಿಸದೇ ಇರಲು ರೋಷನ್ ಬೇಗ್ ನಿರ್ಧಾರ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸಕ್ರಿಯ ರಾಜಕಾರಣಕ್ಕೆ ಗುಡ್‍ಬೈ ಹೇಳಲು ಮುಂದಾಗಿದ್ದಾರೆ.
ಹೌದು. ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂ ಮಹತ್ವದ ತೀರ್ಪು ನೀಡಿದ ಬಳಿಕ 16 ಮಂದಿಯ ಜೊತೆಗೆ ರೋಷನ್ ಬೇಗ್ ಬಿಜೆಪಿ ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿ ಹೊರ ಬಿದ್ದಿತ್ತು. ಆದರೆ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಶಿವಾಜಿನಗರದಿಂದ ಪಕ್ಷೇತರದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದರು. ಆದರೆ ಈಗ ಚುನಾವಣಾ ರಾಜಕೀಯಕ್ಕೆ ಪೂರ್ಣವಿರಾಮ ಹಾಕಲು ಮುಂದಾಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ರೋಷನ್ ಬೇಗ್ ಶನಿವಾರ ಆಪ್ತರ ಜೊತೆ ಮಾತನಾಡಿದ್ದು, ಈ ವೇಳೆ ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿಯುವ ಮಾತನ್ನು ಆಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಬೆಂಬಲಿಗರು ಚುನಾವಣೆಗೆ ಸ್ಪರ್ಧಿಸಬೇಕೆಂದು ಒತ್ತಡ ಹೇರಿದಾಗ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಹಿಂದೆ ಸರಿದದ್ದು ಯಾಕೆ?
ರೋಷನ್ ಬೇಗ್ 3 ಕಾರಣಗಳಿಂದಾಗಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಮೊದಲನೆಯದಾಗಿ ಐಎಂಎ ಪ್ರಕರಣದಲ್ಲಿ ಹೆಸರು ಕೇಳಿ ಬಂದಿದೆ. ಈ ವಿಚಾರದಲ್ಲಿ ಮುಸ್ಲಿಮ್ ಸಮುದಾಯ ಸಹ ಬೇಗ್ ವಿರುದ್ಧ ನಿಂತುಕೊಂಡಿದೆ. ಎರಡನೇಯದಾಗಿ ಬಿಜೆಪಿ ಟಿಕೆಟ್ ಸಿಕ್ಕಿದರೆ ನಿಲ್ಲುವ ಸಾಧ್ಯತೆ ಇತ್ತು. ಆದರೆ ಬಿಜೆಪಿ ಕೊನೆ ಕ್ಷಣದಲ್ಲಿ ಟಿಕೆಟ್ ನೀಡದೇ ಬಿಬಿಎಂಪಿಯ ಮಾಜಿ ಸದಸ್ಯ ಶರವಣ ಅವರಿಗೆ ನೀಡಿದೆ.
ಮೂರನೇಯದಾಗಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತರೂ ಸದ್ಯದ ಪರಿಸ್ಥಿತಿಯಲ್ಲಿ ಗೆಲ್ಲುವುದು ಕಷ್ಟ. ಈ ಎಲ್ಲ ಕಾರಣದಿಂದ ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿದಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.
ಬೆಂಬಲ ಯಾರಿಗೆ?
ಚುನಾವಣಾ ಕಣದಿಂದ ಹಿಂದಕ್ಕೆ ಸರಿದ ಪರಿಣಾಮ ರೋಷನ್ ಬೇಗ್ ಯಾರಿಗೆ ಬೆಂಬಲ ನೀಡುತ್ತಾರೆ ಎನ್ನುವ ಕುತೂಹಲ ಮೂಡಿದೆ. ಆದರೆ ಈ ಚುನಾವಣೆಯಲ್ಲಿ ಬೇಗ್ ಯಾರಿಗೂ ಬೆಂಬಲ ನೀಡದೇ ಇರಲು ನಿರ್ಧಾರ ಮಾಡಿದ್ದಾರೆ ಎನ್ನುವ ವಿಚಾರ ಆಪ್ತ ವಲಯದಿಂದ ಕೇಳಿಬಂದಿದೆ.