ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರೂ ಇಂದು ನಡೆಯುವ ಅಧಿವೇಶನಕ್ಕೆ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿತರಾಗಿರುವ ಶಿವಾಜಿನಗರ ಶಾಸಕ ರೋಷನ್ ಬೇಗ್ ಹಾಜರಾಗಲಿದ್ದಾರೆ. ಈ ಮೂಲಕ ಶಾಸಕರು ಯೂಟರ್ನ್ ತೆಗೆದುಕೊಳ್ತಾರಾ ಎಂಬ ಪ್ರಶ್ನೆ ಎದ್ದಿದೆ.
ತಾನು ಸದನಕ್ಕೆ ಹೋಗುವ ಮೂಲಕ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಡಲು ಬೇಗ್ ಮುಂದಾಗಿದ್ದಾರೆ. ಕೇವಲ ಮುಖ್ಯಮಂತ್ರಿಗಾಗಿ ಶಾಸಕ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಎಐಸಿಸಿ ವರಿಷ್ಠ ನಾಯಕ ಗುಲಾಂ ನಬಿ ಆಜಾದ್ ಬೆಂಗಳೂರಿಗೆ ಬಂದರೂ ಒಂದು ಕಾಲದ ತಮ್ಮ ಆಪ್ತನನ್ನ ಕರೆದು ಮಾತನಾಡಿಸಲಿಲ್ಲ. ಇಷ್ಟೆಲ್ಲ ಬೆಳವಣಿಗೆ ಆದರೂ ಕಾಂಗ್ರೆಸ್ ನಾಯಕರಾದ ವೇಣು ಗೋಪಾಲ್, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಯಾರು ಕೂಡ ಕರೆದು ಮಾತನಾಡಿಲ್ಲ. ಅಲ್ಲದೆ ಮನವೊಲಿಕೆಗೂ ಯತ್ನಿಸಿಲ್ಲ. ಇದರಿಂದ ಅಸಮಾಧಾನಗೊಂಡ ರೋಷನ್ ಬೇಗ್, ಪಕ್ಷದ ನಾಯಕರಿಗೂ ನನಗೂ ಸಂಬಂಧ ಇಲ್ಲ. ಪ್ರತ್ಯೇಕವಾಗಿ ಇದ್ದುಕೊಂಡೇ ನಿಮಗೆ ಬೆಂಬಲ ನೀಡುತ್ತೇನೆ ಎಂದು ಸಿಎಂ ಬಳಿ ಹೇಳಿದ್ದಾರೆ ಎನ್ನಲಾಗಿದೆ.
ಐಎಂಎ ಪ್ರಕರಣದಿಂದ ಪಾರಾಗಲು ಸಿಎಂ ಅವರು ರೋಷನ್ ಬೇಗ್ ಬೆಂಬಲಕ್ಕೆ ನಿಂತ್ರಾ ಅಥವಾ ರೋಷನ್ ಬೇಗ್ ಅವರೇ ಐಎಂಎ ಕೇಸ್ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ರಾ ಎಂಬ ಅನುಮಾನ ಮೂಡುತ್ತಿದೆ. ಒಟ್ಟಿನಲ್ಲಿ ರೋಷನ್ ಬೇಗ್ ಅವರು ತಾವು ಈಗಾಗಲೇ ನೀಡಿರುವ ರಾಜೀನಾಮೆಯನ್ನು ವಾಪಾಸ್ ಪಡೆಯೋದಾ ಬೇಡ್ವಾ ಅನ್ನುವ ಗೊಂದಲದಲ್ಲಿದ್ದಾರೆ.