ಬೆಂಗಳೂರು: ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಗಂಟುಮೂಟೆ ಚಿತ್ರದ ಟ್ರೇಲರ್ ನೋಡಿದವರೆಲ್ಲ ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ಗಾಢವಾದ ನಂಬಿಕೆ ಹೊಂದಿದ್ದರು. ಈ ಚಿತ್ರ ಅಂಥಾ ನಂಬಿಕೆಗಳನ್ನೆಲ್ಲ ನಿಜವಾಗಿಸೋ ಸ್ವರೂಪದೊಂದಿಗೇ ತೆರೆ ಕಂಡಿದೆ. ತೊಂಭತ್ತರ ದಶಕದ ಹೈಸ್ಕೂಲು ಪ್ರೇಮವೊಂದರ ಘಮ ಹೊತ್ತು ತಂದಿರುವ ಈ ಚಿತ್ರ ಬಹುತೇಕರ ನೆನಪುಗಳನ್ನು ಕೆಣಕಿದೆ. ತನ್ನ ಸೂಕ್ಷ್ಮ ಕಥಾ ಹಂದರದಿಂದ ಹಲವರ ಭಾವಕೋಶಗಳನ್ನು ನವಿರಾಗಿಯೇ ತಾಕಿದೆ. ಇದು ಯಶಸ್ವಿ ಚಿತ್ರವೊಂದರ ಲಕ್ಷಣ. ಅದಿಲ್ಲದೇ ಹೋಗಿದ್ದರೆ ದೊಡ್ಡ ಸಿನಿಮಾಗಳ ನಡುವೆ ಕಾಲೂರಿ ನಿಂತು ಯಶಸ್ವಿ ಪ್ರದರ್ಶನ ಕಾಣುವ ಕಸುವು ಈ ಚಿತ್ರಕ್ಕೆ ಬರುತ್ತಿರಲಿಲ್ಲವೇನೋ…?
Advertisement
ಈ ಸ್ಪರ್ಧೆಯ ತೀವ್ರತೆಯ ನಡುವೆ ಸರಿಕಟ್ಟಾದೊಂದು ಕಂಟೆಂಟಿಲ್ಲದೇ ಹೋದರೆ ಹೊಸಬರ ತಂಡವೊಂದು ಅಖಾಡಕ್ಕಿಳಿದು ಸೆಣೆಸುವುದು ಸಾಧ್ಯವಾಗದ ಮಾತು. ಆದರೆ ರೂಪಾ ರಾವ್ ತಮ್ಮ ಮೊದಲ ಹೆಜ್ಜೆಯಲ್ಲಿಯೇ ಹೊಸಬರನ್ನು ಜೊತೆಗಿಟ್ಟುಕೊಂಡೂ ಗೆದ್ದಿದ್ದಾರೆ. ಸ್ಟಾರ್ ಸಿನಿಮಾಗಳಿದ್ದರೂ ಕೂಡಾ ಪ್ರೇಕ್ಷಕರೆಲ್ಲ ಗಂಟುಮೂಟೆಯನ್ನು ನೋಡುತ್ತಾ ಮುದಗೊಳ್ಳುತ್ತಿದ್ದಾರೆ. ಎಲ್ಲ ಚೌಕಟ್ಟುಗಳನ್ನು ಮೀರಿದ ಈ ಚೇತೋಹಾರಿ ಚಿತ್ರವೀಗ ಬಾಯಿಂದ ಬಾಯಿಗೆ ಹರಡಿಕೊಂಡಿರೋ ಒಳ್ಳೆ ಮಾತುಗಳ ಮೂಲಕವೇ ಯಶಸ್ವೀ ಪ್ರದರ್ಶನ ಕಾಣುತ್ತಿದೆ.
Advertisement
Advertisement
ಇದು ಅದಾಗ ತಾನೇ ಹದಿಹರೆಯದ ಹೊಸ್ತಿಲ ಬಳಿ ಹೆಜ್ಜೆಯಿಡುತ್ತಿರೋ ಹೈಸ್ಕೂಲು ಜೀವನದ ಕಥೆಯಾಧಾರಿತ ಚಿತ್ರ. ಅದು ಮೊದಲ ಪ್ರೇಮದ ಪುಳಕಗಳು ಎಳೇ ಮನಸೊಳಗೆ ಹುರಿಗೊಳ್ಳುವ ಕಾಲ. ಇಂಥಾ ಹೊತ್ತಿನಲ್ಲಿಯೇ ಬೆಂಗಳೂರಿನ ಒಳ್ಳೆಯ ಕುಟುಂಬದ ಕುಡಿಯಂತಿರೋ ನಾಯಕಿ ಮೀರಾ ಕೂಡಾ ಅಂಥಾದ್ದೇ ಭಾವಗಳಿಗೆ ಪಕ್ಕಾಗುತ್ತಾಳೆ. ಆಕೆಯ ಮನೋಭೂಮಿಕೆಯ ಇಶಾರೆಯ ಮೇರೆಗೆ ಇಡೀ ಕಥೆ ಕದಲುತ್ತದೆ. ಇಂಥಾ ಕಥೆಗಳು ಹೆಣ್ಣಿನ ಮೂಲಕ ನಿರೂಪಣೆಗೊಳ್ಳೋದೇ ಹೊಸ ವಿಚಾರ. ಅದನ್ನು ಮತ್ತಷ್ಟು ಹೊಸತನಗಳೊಂದಿಗೆ ರೂಪಾ ರಾವ್ ಕಟ್ಟಿ ಕೊಟ್ಟಿದ್ದಾರೆ. ಗಂಟು ಮೂಟೆ ಚಿತ್ರಕ್ಕೆ ರಾಜ್ಯಾದ್ಯಂತ ವ್ಯಾಪಕ ಬೆಂಬಲವೇ ತೋರಿ ಬರುತ್ತಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ವಿಚಾರದಲ್ಲಿಯೂ ಏರುಗತಿ ಕಾಣುತ್ತಿದೆ. ಈ ಎಲ್ಲ ಅಂಶಗಳೊಂದಿಗೆ ರೂಪಾ ರಾವ್ ನಿರ್ದೇಶನದ ಗಂಟುಮೂಟೆ ಗೆದ್ದಿದೆ.