– ಎಲ್ಲಾ ಆರೋಪಿಗಳಿಗೆ ಕ್ಲೀನ್ ಚಿಟ್
– ತೆಲಂಗಾಣ ಪೊಲೀಸರಿಂದ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ
ಹೈದರಾಬಾದ್: ರೋಹಿತ್ ವೆಮುಲಾ (Rohit Vemula) ದಲಿತ ವಿದ್ಯಾರ್ಥಿಯಲ್ಲ. ತನ್ನ ಜಾತಿಯ (Caste) ಗುರುತು ಬಹಿರಂಗವಾಗಬಹುದು ಎಂಬ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತೆಲಂಗಾಣ ಪೊಲೀಸರು (Telangana Police) ಹೈಕೋರ್ಟ್‌ಗೆ ತಿಳಿಸಿ ಪ್ರಕರಣದ ತನಿಖೆಯನ್ನು ಕೊನೆಗೊಳಿಸಿದ್ದಾರೆ.
Advertisement
2016ರ ಜನವರಿಯಲ್ಲಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೆಮುಲಾ ಅವರ ಆತ್ಮಹತ್ಯೆ ಬಳಿಕ ವಿಶ್ವವಿದ್ಯಾನಿಲಯಗಳಲ್ಲಿ ದಲಿತರ ಮೇಲಿನ ತಾರತಮ್ಯದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿತ್ತು.
Advertisement
ವೆಮುಲಾ ಕುಟುಂಬ ದಲಿತರು (Dalit) ಎಂಬುದನ್ನು ಸಾಬೀತು ಪಡಿಸಲು ಯಾವುದೇ ಸಾಕ್ಷ್ಯಾಧಾರಗಳು ಸಿಗದ ಕಾರಣ ಪೊಲೀಸರು ಈಗ ಪ್ರಕರಣದ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ. ವೆಮುಲಾ ಕುಟುಂಬದ ಜಾತಿ ಪ್ರಮಾಣ ಪತ್ರ ನಕಲಿಯಾಗಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಅಂತಿಮ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಗಾಂಧಿ ಕುಟುಂಬಕ್ಕೆ ರಾಯ್‌ಬರೇಲಿ ನಂಟು – ಇಲ್ಲಿದೆ ಕುತೂಹಲಕಾರಿ ಘಟ್ಟಗಳು
Advertisement
Advertisement
ಹೈಕೋರ್ಟ್ ಈಗ ಕೆಳ ನ್ಯಾಯಾಲಯದಲ್ಲಿ ಈ ವರದಿಗೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸುವಂತೆ ವೆಮುಲಾ ಕುಟುಂಬಸ್ಥರಿಗೆ ಸೂಚಿಸಿದೆ.
ಸಿಕಂದರಾಬಾದ್‌ನ ಮಾಜಿ ಸಂಸದ ಬಂಡಾರು ದತ್ತಾತ್ರೇಯ, ಎಂಎಲ್‌ಸಿ ಎನ್. ರಾಮಚಂದರ್ ರಾವ್, ಹೈದರಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಅಪ್ಪಾ ರಾವ್, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಎಬಿವಿಪಿ ಮುಖಂಡರು ಸೇರಿದಂತೆ ಹಲವಾರನ್ನು ಪ್ರಕರಣದ ಆರೋಪಿಗಳನ್ನಾಗಿ ಮಾಡಲಾಗಿತ್ತು.ಈಗ ಪೊಲೀಸರು ಎಲ್ಲರನ್ನು ಆರೋಪದಿಂದ ಕೈ ಬಿಟ್ಟಿದ್ದಾರೆ.
ರೋಹಿತ್ ಅವರ ಸಹೋದರ ರಾಜಾ ವೇಮುಲಾ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ, ಇದೊಂದು ಅಸಂಬದ್ಧ ವರದಿ. ನನ್ನ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ತಿಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇ 4 ರಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಲು ಕುಟುಂಬ ಮುಂದಾಗಿದೆ. 2017 ರಲ್ಲಿ ಪೊಲೀಸರು ತನಿಖೆಯನ್ನು ನಿಲ್ಲಿಸಿದ್ದಾರೆ ಮತ್ತು ಜಾತಿ ದೃಢೀಕರಣದ ವಿಷಯದಲ್ಲಿ 15 ಸಾಕ್ಷಿಗಳ ಹೇಳಿಕೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಅವರು ಟೀಕಿಸಿದರು. ಇದನ್ನೂ ಓದಿ: ಚುನಾವಣೆ ಕಾರಣಕ್ಕೆ ಮೇ 7 ರಂದು ಕೇಜ್ರಿವಾಲ್ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ: ಸುಪ್ರೀಂ
2015ರಲ್ಲಿ ನಡೆದ ಪ್ರಕರಣ ಏನು? ಆರೋಪ ಏನು?
26 ವರ್ಷದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಸೇರಿದಂತೆ ವಿವಿಯ ಐದು ವಿದ್ಯಾರ್ಥಿಗಳು ಪ್ರತಿಭಟನೆಯೊಂದರ ವೇಳೆ ಎಬಿವಿಪಿ ವಿದ್ಯಾರ್ಥಿ ನಾಯಕರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿತ್ತು. ನಂತರ ಐವರನ್ನೂ ಕಾಲೇಜಿನಿಂದ ಅಮಾನತು ಮಾಡಲಾಗಿತ್ತು. ವಿವಿ ವಿಚಾರಣೆ ಬಳಿಕ ರೋಹಿತ್ ಸೇರಿ ಎಲ್ಲರನ್ನೂ ಆರೋಪ ಮುಕ್ತಗೊಳಿಸಲಾಗಿತ್ತು.
ಸಿಕಂದರಬಾದ್ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿ, ವಿವಿ ಜಾತಿವಾದಿಗಳ, ಉಗ್ರವಾದಿಗಳ, ದೇಶವಿರೋಧಿ ರಾಜಕೀಯದ ಬೀಡಾಗಿದ್ದು, ಎಬಿವಿಪಿ ಮುಖಂಡನ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳದೆ ವಿವಿ ಮೂಕಪ್ರೇಕ್ಷಕನಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಗೆ ಪತ್ರ ಬರೆದು ದೂರು ನೀಡಿದ್ದರು.
ಈ ಪತ್ರದ ಬಳಿಕ ಮಾನವ ಸಂಪನ್ಮೂಲ ಸಚಿವಾಲಯ ವಿವಿಗೆ ಪತ್ರ ಬರೆದು ವಿದ್ಯಾರ್ಥಿಗಳ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನೆ ಮಾಡಿತ್ತು. ಪತ್ರದ ಹಿನ್ನೆಲೆಯಲ್ಲಿ ವಿವಿ ಡಿ. 21ರಂದು ರೋಹಿತ್ ಮತ್ತು ಇತರ ನಾಲ್ವರನ್ನು ಅಮಾನತುಗೊಳಿಸಿ, ಹಾಸ್ಟೆಲ್ ಮತ್ತು ಕೆಫೆಟೇರಿಯಾದಿಂದಲೂ ಹೊರ ಹಾಕಿತ್ತು. ಅಮಾನತು ಮಾಡಿದ್ದಕ್ಕೆ 2016ರ ಜನವರಿ 17 ರಂದು ರೋಹಿತ್ ವೆಮುಲಾ ಮನನೊಂದು ತನ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷಗಳು ದೇಶವ್ಯಾಪಿ ಪ್ರತಿಭಟನೆ ನಡೆಸಿದ್ದವು.
ರೋಹಿತ್ ವೆಮುಲಾ ಪಿಎಚ್‌ಡಿ ಸಂಶೋಧನೆ ಮಾಡುತ್ತಿದ್ದಾಗ ಪ್ರತಿ ತಿಂಗಳು 25 ಸಾವಿರ ರೂ. ಫೆಲೋಶಿಪ್ ಪಡೆಯುತ್ತಿದ್ದರು. ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳ್ಳದ ಕಾರಣ ವೆಮುಲಾಗೆ ಬರುತ್ತಿದ್ದ ಫೆಲೋಶಿಪ್ ನಿಲ್ಲಿಸಲಾಗಿತ್ತು.