ರೋಹಿತ್‌ ನಾಯಕತ್ವದಲ್ಲಿ WTC ಫೈನಲ್‌, ಚಾಂಪಿಯನ್ಸ್‌ ಟ್ರೋಫಿ ಗೆಲ್ಲುತ್ತೇವೆ: ಜಯ್‌ ಶಾ ವಿಶ್ವಾಸ

Public TV
2 Min Read
jay shah 2

ಮುಂಬೈ: ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ನಾವು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಫೈನಲ್ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು (Champions Trophy) ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ಬಿಸಿಸಿಐ (BCCI) ಕಾರ್ಯದರ್ಶಿ ಜಯ್‌ ಶಾ (Jay Shah) ಹೇಳಿದ್ದಾರೆ.

ಈ ಮೂಲಕ ಏಕದಿನ ಮತ್ತು ಟೆಸ್ಟ್ ಮಾದರಿಗಳಲ್ಲಿ ರೋಹಿತ್ ಶರ್ಮಾ ನಾಯಕರಾಗಿ ಮುಂದುವರಿಯುವುದನ್ನು ಬಿಸಿಸಿಐ ಖಚಿತ ಪಡಿಸಿದಂತಾಗಿದೆ. ವಿಡಿಯೋ ಮೂಲಕ ಜಯ್‌ ಶಾ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.

 

ಟಿ20 ವಿಶ್ವಕಪ್‌ (T20 World Cup) ಗೆಲುವನ್ನು ಮುಖ್ಯ ಕೋಚ್‌ ರಾಹುಲ್ ದ್ರಾವಿಡ್, ಟಿ20 ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರಿಗೆ ಜಯ್‌ ಶಾ ಅರ್ಪಿಸಿದ್ದಾರೆ.

ಒಂದು ವರ್ಷದೊಳಗೆ ನಾವು ಮೂರು ಫೈನಲ್‌ ಪಂದ್ಯ ಆಡಿದ್ದೇವೆ. ಕಳೆದ ವರ್ಷ ಜೂನ್ 11 ರಂದು ನಾವು WTC ಫೈನಲ್‌ನಲ್ಲಿ ಸೋತಿದ್ದೇವೆ. ನವೆಂಬರ್ 19 ರಂದು 10 ಪಂದ್ಯಗಳನ್ನು ಗೆದ್ದು ನಾವು ಹೃದಯಗಳನ್ನು ಗೆದ್ದರೂ ಏಕದಿನ ವಿಶ್ವಕಪ್‌ ಗೆಲ್ಲಲು ವಿಫಲವಾಗಿದ್ದೇವೆ. ಆದರೆ ಈ ವರ್ಷದ ಆರಂಭದಲ್ಲಿ ರಾಜ್‌ಕೋಟ್‌ನಲ್ಲಿ ನಾನು ಹೇಳಿದಂತೆ ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಹೃದಯಗಳನ್ನು ಮತ್ತು ವಿಶ್ವಕಪ್ ಗೆದ್ದಿದೆ ಎಂದು ತಿಳಿಸಿದರು.

jay shah 1

ಫೈನಲ್‌ನ ಕೊನೆಯ ಐದು ಓವರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಜೊತೆಗೆ ಬೌಂಡರಿ ಲೈನ್‌ ಬಳಿ ಅತ್ಯುತ್ತಮ ಕ್ಯಾಚ್‌ ಹಿಡಿದ ಸೂರ್ಯಕುಮಾರ್‌ ಯಾದವ್‌ ಅವರನ್ನು ಜಯ್‌ ಶಾ ಶ್ಲಾಘಿಸಿದರು.

2025 ರ ಫೆಬ್ರವರಿ-ಮಾರ್ಚ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ. ಶಾ ಅವರ ಹೇಳಿಕೆಯಿಂದ ಭಾರತ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುವುದು ಖಚಿತವಾಗಿದೆ. ಆದರೆ ಪಾಕಿಸ್ತಾನಕ್ಕೆ ತೆರಳುತ್ತಾ ಇಲ್ಲವೋ ಎನ್ನುವುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ ಎರಡು ಬಾರಿ ರೋಹಿತ್‌ ಶರ್ಮಾ ನಾಯಕತ್ವದ ಅಡಿಯಲ್ಲಿ ಫೈನಲ್‌ ಆಡಿ ರನ್ನರ್‌ ಅಪ್‌ ಸ್ಥಾನವನ್ನು ಪಡೆದುಕೊಂಡಿದೆ.

jay shah 3

202-25ರ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಆಡಿದ 9 ಟೆಸ್ಟ್‌ ಪಂದ್ಯಗಳಲ್ಲಿ 6 ಪಂದ್ಯ ಗೆದ್ದು74 ಅಂಕ ಸಂಪಾದಿಸಿ 68.52 ಪಿಸಿಟಿಯೊಂದಿಗೆ (ಪರ್ಸಂಟೇಜ್‌ ಆಫ್‌ ಪಾಯಿಂಟ್‌) ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 12 ಪಂದ್ಯವಾಡಿದ್ದು 8 ಪಂದ್ಯ ಗೆದ್ದು90 ಅಂಕ ಸಂಪಾದಿಸಿ 62.50 ಪಿಸಿಟಿಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಮೂರು ಟೆಸ್ಟ್ ಸರಣಿ ಆಡಲಿದೆ.

Share This Article