ನವದೆಹಲಿ: ಭಾರತದ ಉಪನಾಯಕ ರೋಹಿತ್ ಶರ್ಮಾ ತನ್ನ ಆರಂಭಿಕ ಜೊತೆಗಾರ ಶಿಖರ್ ಧವನ್ ತನ್ನೊಂದಿಗೆ ತಾನೇ ಮಾತನಾಡಿಕೊಳ್ಳುವುದನ್ನು ತಮ್ಮ ಮೊಬೈಲ್ ಫೋನಿನಲ್ಲಿ ಸೆರೆಹಿಡಿದಿದ್ದಾರೆ.
ವಿಮಾನದಲ್ಲಿ ಪ್ರಯಾಣಿಸುವಾಗ ತನ್ನ ಪಕ್ಕ ಕುಳಿತ ಶಿಖರ್ ಧವನ್ ಒಬ್ಬರೇ ಮಾತನಾಡಿಕೊಳ್ಳುತ್ತಿರುವುದನ್ನು ಗೌಪ್ಯವಾಗಿ ವಿಡಿಯೋ ಮಾಡಿರುವ ರೋಹಿತ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
https://www.instagram.com/p/B2og1eGB7Fy/
ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ರೋಹಿತ್ ಶರ್ಮಾ ಅವರು, ಆತ ನನ್ನ ಜೊತೆ ಮಾತನಾಡುತ್ತಿಲ್ಲ. ನನ್ನನ್ನು ಬಿಟ್ಟರೆ ಕಾಲ್ಪನಿಕ ಸ್ನೇಹಿತರ ಜೊತೆ ಮಾತನಾಡಲು ಆತನಿಗೆ ವಯಸ್ಸಾಗಿದೆ. ಯಾರ ಜೊತೆಗೆ ಮಾತು ಎಂದು ಪ್ರಶ್ನಿಸಿ ಶಿಖರ್ ಧವನ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಈ ವಿಡಿಯೋವನ್ನು ತಕ್ಷಣ ನೋಡಿ ಕಮೆಂಟ್ ಮಾಡಿರುವ ಶಿಖರ್ ಧವನ್, ನಾನು ಕವನ ಹೇಳುಕೊಳ್ಳುವಾಗ ರೋಹಿತ್ ಇದನ್ನು ವಿಡಿಯೋ ಮಾಡಿದ್ದಾರೆ. ನಾನು ಆ ದಿನ ತುಂಬಾ ಖುಷಿಯಾಗಿದ್ದೆ. ಅದಕ್ಕೆ ನಾನು ಕವನವನ್ನು ಹೇಳುತ್ತಿದ್ದೆ ಎಂದು ಧವನ್ ಕಮೆಂಟ್ ಮಾಡಿದ್ದಾರೆ.
ಭಾರತ ಪ್ರಸ್ತುತ ದಕ್ಷಿಣ ಆಫ್ರಿಕಾದೊಂದಿಗೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಆಡುತ್ತಿದೆ. ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಸರಣಿಯ ಮೊದಲ ಪಂದ್ಯ ಮಳೆಯ ಕಾರಣಕ್ಕೆ ರದ್ದಾಗಿದೆ. ಮೊಹಾಲಿಯಲ್ಲಿ ನಡೆದ ಎರಡನೇ ಟಿ0-20 ಪಂದ್ಯವನ್ನು ಭಾರತ ಏಳು ವಿಕೆಟ್‍ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ದಕ್ಷಿಣ ಆಫ್ರಿಕಾ ನೀಡಿದ 150 ರನ್‍ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಕೊಹ್ಲಿ ಪಡೆ, ಶಿಖರ್ ಧವನ್ (31 ಎಸೆತಕ್ಕೆ 40 ರನ್) ಮತ್ತು ವಿರಾಟ್ ಕೊಹ್ಲಿ (52 ಎಸೆತಕ್ಕೆ 72 ರನ್) ಅವರ ಅದ್ಭುತ ಬ್ಯಾಟಿಂಗ್‍ನಿಂದ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ಗೆದ್ದು ಬೀಗಿತು. ಮೂರನೇ ಮತ್ತು ಕೊನೆಯ ಟಿ-20 ಭಾನುವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.