– ಭಾರತಕ್ಕೆ 7 ವಿಕೆಟ್‍ಗಳ ಜಯ – ಸರಣಿ ಸಮಬಲ
ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಕ್ರಿಕೆಟ್ ಸರಣಿಯ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‍ಗಳ ಗೆಲುವು ಪಡೆದಿದೆ. ಕೇವಲ 28 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಸಾಧನೆಯನ್ನು ಮಾಡಿದ್ದಾರೆ.
3 ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 1-1 ಅಂತರದಲ್ಲಿ ಸಮಬಲ ಸಾಧಿಸಿದ್ದು, ಭಾನುವಾರ ನಡೆಯಲಿರುವ ಸರಣಿಯ ಅಂತಿಮ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ ನಿಗಧಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು. ಟೀಂ ಇಂಡಿಯಾ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಕೃಣಾಲ್ ಪಾಂಡ್ಯ 28 ರನ್ ನೀಡಿ 3 ವಿಕೆಟ್ ಪಡೆದರು. ಖಲೀಲ್ ಅಹ್ಮದ್ 2 ವಿಕೆಟ್, ಭುವನೇಶ್ವರ್ ಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಉರುಳಿಸಿದರು.
ನ್ಯೂಜಿಲೆಂಡ್ ನೀಡಿದ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಆರಂಭಿಕ ಬ್ಯಾಟ್ಸ್ ಮನ್‍ಗಳು ಉತ್ತಮ ಆರಂಭ ನೀಡಿದರು. ಕಿವೀಸ್ ಬೌಲರ್ ಗಳನ್ನು ತಮ್ಮ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮೂಲಕವೇ ದಂಡಿಸಿದ ನಾಯಕ ರೋಹಿತ್ ಶರ್ಮಾ 29 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಗಳ ನೆರವಿನಿಂದ 50 ರನ್ ಗಳಿಸಿದರೆ, ಧವನ್ 31 ಎಸೆತಗಳಲ್ಲಿ 30 ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್‍ಗೆ 79 ರನ್ ಜೊತೆಯಾಟ ನೀಡಿತು.
Leading run-getters in
Tests: Sachin Tendulkar ????????- 15921
ODIs: Sachin Tendulkar ???????? – 18426
T20Is: Rohit Sharma ????????- 2276* – today @ Auckland#NZvInd
— Mohandas Menon (@mohanstatsman) February 8, 2019
ಇತ್ತ ಯುವ ಆಟಗಾರ ರಿಷಭ್ ಪಂತ್ ಕೂಡ ಭರ್ಜರಿ ಬ್ಯಾಟಿಂಗ್ ನಡೆಸಿ ಕೇವಲ 28 ಎಸೆತಗಳಲ್ಲಿ 40 ರನ್ ಸಿಡಿಸಿ ಅಜೇಯರಾಗಿ ಉಳಿದರು. ಮತ್ತೊಬ್ಬ ಯುವ ಬ್ಯಾಟ್ಸ್ ಮನ್ ಶಂಕರ್ 14 ರನ್ ಗಳಿಸಿದರೆ, ಮಾಜಿ ನಾಯಕ ಎಂಎಸ್ ಧೋನಿ 17 ಎಸೆತಗಳಲ್ಲಿ 20 ರನ್ ಗಳಿಸಿ ಅಜೇಯರಾಗಿ ಉಳಿದರು. ಕಿವೀಸ್ ಪರ ಸೌಧಿ, ಮಿಚೆಲ್, ಫಾಗ್ರ್ಯೂಸನ್ ತಲಾ 1 ವಿಕೆಟ್ ಪಡೆದರು.
ರೋಹಿತ್ ದಾಖಲೆ: ಪಂದ್ಯದಲ್ಲಿ 35 ರನ್ ಗಳಿಸಿದ್ದ ವೇಳೆ ರೋಹಿತ್ ನ್ಯೂಜಿಲೆಂಡಿನ ಮಾರ್ಟಿನ್ ಗುಪ್ಟಿಲ್ ದಾಖಲೆ ಮುರಿದು ಟಿ20 ಹೆಚ್ಚು ರನ್ ಗಳಿಸಿದ ಆಟಗಾರ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದರು. ರೋಹಿತ್ 92 ಪಂದ್ಯಗಳಲ್ಲಿ 2,288 ರನ್ ಗಳಿಸಿದ್ದರೆ, ಗುಪ್ಟಿಲ್ 76 ಪಂದ್ಯಗಳಲ್ಲಿ 2,272 ರನ್ ಗಳಿಸಿದ್ದಾರೆ. ವಿಶೇಷೆಂದರೆ ರೋಹಿತ್ ಟಿ20ಯಲ್ಲಿ ಅತೀ ಹೆಚ್ಚು ಶತಕ (4 ಶತಕ) ಮತ್ತು ಅರ್ಧ ಶತಕ (16) ಶತಕಗಳನ್ನು ಗಳಿಸಿದ್ದಾರೆ. ಗುಪ್ಟಿಲ್ 2 ಶತಕ, 14 ಅರ್ಧ ಶತಕಗಳನ್ನು ಗಳಿಸಿದ್ದಾರೆ. ವಿರಾಟ್ ಕೊಹ್ಲಿ 19 ಅರ್ಧ ಶತಕಗಳನ್ನು ಸಿಡಿಸಿ 2ನೇ ಸ್ಥಾನದಲ್ಲಿದ್ದಾರೆ.
ಟಿ20 ಕ್ರಿಕೆಟಿನಲ್ಲಿ ರೋಹಿತ್ ಮತ್ತೊಂದು ಸಾಧನೆಯನ್ನು ಮಾಡಿದ್ದು, 102 ಸಿಕ್ಸರ್ ಗಳೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 100 ಸಿಕ್ಸರ್ ಸಾಧನೆ ಮಾಡಿದ 3ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಉಳಿದಂತೆ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಹಾಗೂ ಗುಪ್ಟಿಲ್ ತಲಾ 103 ಸಿಕ್ಸರ್ ಸಾಧನೆ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv