ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ (Champions Trophy Final) ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಹೌದು. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡ ಹೀನಾಯವಾಗಿ ಸೋತ ಬಳಿಕವೇ ರೋಹಿತ್ ಭವಿಷ್ಯದ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೇ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಲಿದ್ದಾರೆ ಎಂದು ಕೆಲ ವರದಿಗಳೂ ಹೇಳಿದ್ದವು. ಇದೀಗ ಚಾಂಪಿಯನ್ಸ್ ಟ್ರೋಫಿ ಬಳಿಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳುವುದು ಖಚಿತವಾಗಿದೆ ಎನ್ನಲಾಗುತ್ತಿದೆ. ಕಳೆದ ವರ್ಷ ಟಿ20 ವಿಶ್ವಕಪ್ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ರೋಹಿತ್ ಗುಡ್‌ಬೈ ಹೇಳಿದ್ದರು.
ಏತನ್ಮಧ್ಯೆ ಭಾರತದ ಮುಂದಿನ ಟೆಸ್ಟ್ ಸರಣಿ ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿದ್ದು, ಭಾರತದ ಮುಂದಿನ ಪ್ರಮುಖ ಏಕದಿನ ಟೂರ್ನಿ 2027ರ ಏಕದಿನ ವಿಶ್ವಕಪ್ ಆಗಿದೆ. ಅದಕ್ಕಿನ್ನೂ ಬಹಳ ಸಮಯವಿರುವ ಕಾರಣ ಭಾರತ ತಂಡದಲ್ಲಿ ಪರಿವರ್ತನೆಯ ಸಮಯ ಬಂದಿದೆ ಎಂಬ ಚಿಂತನೆ ನಡೆದಿದೆ. ಇದನ್ನೂ ಓದಿ: ಭಾರತ-ಕಿವೀಸ್ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ 5,000 ಕೋಟಿ ಬೆಟ್ಟಿಂಗ್ – ಅಂಡರ್‌ವರ್ಲ್ಡ್ ನಂಟು
ರೋಹಿತ್ ನಿರ್ಲಕ್ಷಿಸಲು ಸಾಧ್ಯವೇ ಇಲ್ಲ..
ರೋಹಿತ್ ಶರ್ಮಾ ವಯಸ್ಸಿನ ಹೊರತಾಗಿಯೂ ಅವರ ಸಾಮರ್ಥ್ಯ ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಏಕದಿನ ಕ್ರಿಕೆಟ್ ನಲ್ಲಿ 3 ದ್ವಿಶತಕ ಸಿಡಿಸಿದ ಏಕೈಕ ಆಟಗಾರ ರೋಹಿತ್ ಶರ್ಮಾ. ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಾ ನೀಡುವ ಸ್ಫೋಟಕ ಆರಂಭವನ್ನು ನಿರ್ಲಕ್ಷಿಸುವುದು ಕಷ್ಟಕರ ಎನ್ನಲಾಗುತ್ತಿದೆ.
ಸೋತರೆ ನಿವೃತ್ತಿ ಸಾಧ್ಯತೆ:
ಇನ್ನೂ ಟೀಂ ಇಂಡಿಯಾದಲ್ಲಿ ಇದೀಗ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದೆ. 2027ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಗುರಿಯಾಗಿಸಿಕೊಂಡು ಟೂರ್ನಿಗೆ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಭಾರತ ತಂಡದಲ್ಲಿ ಬದಲಾವಣೆಯ ಪರ್ವ ಏಳುವ ಸಾಧ್ಯತೆ ಇದೆ. ಇದಕ್ಕೆ ದುಬೈನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಪ್ರಮುಖ ವೇದಿಕೆಯಾಗಿ ಮಾರ್ಪಟ್ಟಿದೆ.
ಈ ಫೈನಲ್‌ನಲ್ಲಿ ಭಾರತ-ನ್ಯೂಜಿಲೆಂಡ್ ವಿರುದ್ಧ ಸೋತರೆ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಿಂದಲೂ ನಿವೃತ್ತಿ ಹೊಂದಬಹುದು. ಆದ್ರೆ ಗೆದ್ದರೆ ರೋಹಿತ್ ಮುಂದಿನ ನಿರ್ಧಾರದ ಬಗ್ಗೆ ಸ್ಪಷ್ಟತೆಯಿಲ್ಲ. ಎರಡೂ ಸಂದರ್ಭಗಳಲ್ಲಿ, ನಿರ್ಧಾರವು ಸಂಪೂರ್ಣವಾಗಿ ರೋಹಿತ್ ಅವರ ಮೇಲಿರುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹರ್ಲೀನ್ ಡಿಯೋಲ್ ಅಬ್ಬರದ ಬ್ಯಾಟಿಂಗ್‌ಗೆ ಡೆಲ್ಲಿ ಬರ್ನ್ – ಗುಜರಾತ್‌ಗೆ 5 ವಿಕೆಟ್‌ಗಳ ರೋಚಕ ಜಯ