ನವದೆಹಲಿ: ಟೀಂ ಇಂಡಿಯಾ ಕ್ರಿಕೆಟರ್ ರೋಹಿತ್ ಶರ್ಮಾ ವಿಶ್ವದ ಅತ್ಯಂತ ಅಪಾಯಕಾರಿ ಬ್ಯಾಟ್ಸ್ಮನ್ ಎಂದು ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಇಲೆವೆನ್‍ನಿಂದ ರೋಹಿತ್ ಶರ್ಮಾ ಹೊರಗುಳಿದಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಮೊದಲ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸುವ ಮೂಲಕ ಸಾಧನೆ ಮಾಡಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕೆ ಇಳಿದು ದಾಖಲೆ ಬರೆದಿದ್ದಾರೆ.
ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಗೌತಮ್ ಗಂಭೀರ್, ಹಿಟ್ ಮ್ಯಾನ್ ರೋಹಿತ್ ಶರ್ಮಾ ಸದ್ಯದ ಅಪಾಯಕಾರಿ ಬ್ಯಾಟ್ಸ್ಮನ್ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ರೋಹಿತ್ ಸಹ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್‍ರಂತೆ ಟೆಸ್ಟ್ ಪಂದ್ಯದ ಚೇಸಿಂಗ್ ವೇಳೆ ನಿರ್ಣಾಯಕರಾಗಬಲ್ಲರು. ಆದರೆ ರೋಹಿತ್‍ರನ್ನ ಉಳಿಸಿಕೊಂಡು ಬೆಳೆಸುವ ಜವಾಬ್ದಾರಿ ತಂಡದ ಮೇಲಿದೆ ಎಂದು ಹೇಳಿದ್ದಾರೆ.
ಸ್ಫೋಟಕ ಇನ್ನಿಂಗ್ಸ್ ಆಡುವುದು ರೋಹಿತ್ ಶರ್ಮಾ ಅವರಿಗೆ ಕರಗತವಾಗಿದೆ. ಟೆಸ್ಟ್ ಪಂದ್ಯದಲ್ಲೂ ಇದನ್ನೇ ಅನುಸರಿಸುವ ಸಾಧ್ಯತೆ ಇತ್ತು. ಆದರೆ ಟೆಸ್ಟ್ ಕ್ರಿಕೆಟ್‍ಗೆ ಅಗತ್ಯವಿರುವ ಅತ್ಯುತ್ತಮ ಆಟವನ್ನು ರೋಹಿತ್ ಆಡಿ ತೋರಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದು ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ್ದ ಟೀ ಇಂಡಿಯಾ ಆಟಗಾರ ರೋಹಿತ್ ಶರ್ಮಾ, ಐಸಿಸಿ ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ ಭಾರೀ ಜಿಗಿತ ಕಂಡಿದ್ದಾರೆ. ಅಲ್ಲದೇ ವೃತ್ತಿ ಜೀವನದ ಶ್ರೇಷ್ಠ ಟೆಸ್ಟ್ ರ್ಯಾಂಕಿಂಗ್ ಸ್ಥಾನ ಪಡೆದ ಸಾಧನೆಯನ್ನು ಮಾಡಿದ್ದಾರೆ.
ಐಸಿಸಿ ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ 36 ಸ್ಥಾನಗಳ ಜಿಗಿತ ಕಂಡ ರೋಹಿತ್ ಶರ್ಮಾ 17ನೇ ಸ್ಥಾನವನ್ನು ಪಡೆದಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 176 ಮತ್ತು 127 ರನ್ ಗಳೊಂದಿಗೆ ಶತಕ ಸಿಡಿಸಿದ್ದ ರೋಹಿತ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.
ದಕ್ಷಿಣ ಆಫ್ರಿಕಾ ಪುಣೆಯಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಆದರೆ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಕೇವಲ 14 ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದಾರೆ.
ಸಿಕ್ಸರ್ ದಾಖಲೆ:
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 6 ಸಿಕ್ಸರ್ ಸಿಡಿಸಿದ್ದ ರೋಹಿತ್, 2ನೇ ಇನ್ನಿಂಗ್ಸ್ ನಲ್ಲಿ 7 ಸಿಕ್ಸರ್ ಸಿಡಿಸಿದರು. ಆ ಮೂಲಕ 149 ಎಸೆತಗಳಲ್ಲಿ 85.23 ಸರಾಸರಿಯಲ್ಲಿ 127 ರನ್ ಗಳಿಸಿ ಔಟಾದರು. ಟೀಂ ಇಂಡಿಯಾ ಪರ ಟೆಸ್ಟ್ ಪಂದ್ಯವೊಂದರಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ್ದ ನವಜೋತ್ ಸಿಂಗ್ ಸಿಧು ಅವರ ದಾಖಲೆಯನ್ನು ರೋಹಿತ್ ಮುರಿದರು. 1994ರಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಲಕ್ನೋ ಟೆಸ್ಟ್ ಪಂದ್ಯದಲ್ಲಿ ಸಿಧು 8 ಸಿಕ್ಸರ್ ಸಿಡಿಸಿದ್ದರು. ರೋಹಿತ್ ಈ ಪಂದ್ಯದಲ್ಲಿ 13 ಸಿಕ್ಸರ್ ಸಿಡಿಸಿದ್ದಾರೆ.
ಟೀಂ ಇಂಡಿಯಾ ಎಲ್ಲಾ ಮಾದರಿಗಳ ಕ್ರಿಕೆಟ್ ಪಂದ್ಯಗಳಲ್ಲಿ ರೋಹಿತ್ ಹೆಚ್ಚು ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದು, 2013ರಲ್ಲಿ ಆಸೀಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ 16 ಸಿಕ್ಸರ್ ಸಿಡಿಸಿದ್ದರು. ಅಲ್ಲದೇ 2017 ರಲ್ಲಿ ಶ್ರೀಲಂಕಾ ವಿರುದ್ಧ ಇಂದೋರಿನಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ 10 ಸಿಕ್ಸರ್ ಸಿಡಿಸಿದ್ದರು.