Connect with us

Cricket

ಮತ್ತೊಂದು ದಾಖಲೆ ಸನಿಹದಲ್ಲಿ ‘ಹಿಟ್ ಮ್ಯಾನ್’

Published

on

– ಗೇಲ್, ಅಫ್ರಿದಿ ಎಲೈಟ್ ಪಟ್ಟಿಗೆ ರೋಹಿತ್

ಮುಂಬೈ: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ತಂಡ ಗೆಲುವಿಗೆ ಕಾರಣರಾದರು. ಅಲ್ಲದೇ ಪಂದ್ಯದಲ್ಲಿ 43 ಎಸೆತಗಳಲ್ಲಿ 6 ಸಿಕ್ಸರ್ ಗಳ ನೆರವಿನಿಂದ 85 ರನ್ ಸಿಡಿಸಿದ್ದರು. ಸದ್ಯ ರೋಹಿತ್ ಶರ್ಮಾ ಭಾರತ ಪರ ಮತ್ತೊಂದು ದಾಖಲೆ ಬರೆಯುವ ಸನಿಹದಲ್ಲಿದ್ದಾರೆ.

ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ 2ನೇ ಟಿ20 ಪಂದ್ಯದಲ್ಲಿ 6 ಸಿಕ್ಸರ್ ಸಿಡಿಸುವುದರೊಂದಿಗೆ ಒಟ್ಟಾರೆ 398 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದು, 2 ಸಿಕ್ಸರ್ ಸಿಡಿಸಿದರೆ ವೃತ್ತಿ ಜೀವನದಲ್ಲಿ 400 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ. ಅಲ್ಲದೇ ವಿಶ್ವದ 3ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ರೋಹಿತ್ ಪಡೆಯಲಿದ್ದಾರೆ. ಬಾಂಗ್ಲಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಈ ಸಾಧನೆ ಮಾಡುವ ಅವಕಾಶವನ್ನು ರೋಹಿತ್ ಪಡೆದಿದ್ದಾರೆ.

ವಿಶ್ವ ಕ್ರಿಕೆಟ್‍ನಲ್ಲಿ ವಿಂಡೀಸ್ ದಿಗ್ಗಜ ಆಟಗಾರ ಗೇಲ್ 534 ಸಿಕ್ಸರ್ ಸಿಡಿಸಿ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದು, ಪಾಕ್‍ನ ಶಹೀದ್ ಅಫ್ರಿದಿ 476 ಸಿಕ್ಸರ್ ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಅಂದಹಾಗೇ 32 ವರ್ಷದ ರೋಹಿತ್ ಇದುವರೆಗೂ ಏಕದಿನ ಕ್ರಿಕೆಟ್‍ನಲ್ಲಿ 232, ಟೆಸ್ಟ್ ಪಂದ್ಯಗಳಲ್ಲಿ 51 ಹಾಗೂ ಟಿ20 ಮಾದರಿಯಲ್ಲಿ 115 ಸಿಕ್ಸರ್ ಸಿಡಿಸಿದ್ದಾರೆ.

2ನೇ ಟಿ20 ಪಂದ್ಯದ ಬಳಿಕ ಟೀಂ ಇಂಡಿಯಾ ಆಟಗಾರ ಚಹಲ್‍ರ ಸಂದರ್ಶನದಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಸಿಕ್ಸರ್ ಸಿಡಿಸಿದ ಕುರಿತ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು. ಸಿಕ್ಸರ್ ಸಿಡಿಸಲು ದೊಡ್ಡ ದೇಹ, ಮಾಂಸಖಂಡಗಳು ಅಗತ್ಯವಿಲ್ಲ. ಬೇಕಾದರೆ ನೀನು (ಚಹಲ್) ನೀನು ಸಿಕ್ಸರ್ ಸಿಡಿಸಬಹುದು. ಸಿಕ್ಸರ್ ಸಿಡಿಸಲು ಪವರ್ ಒಂದೇ ಮುಖ್ಯವಲ್ಲ, ಟೈಮಿಂಗ್ ಮುಖ್ಯವಾಗುತ್ತದೆ ಎಂದು ರೋಹಿತ್ ಹೇಳಿದ್ದರು. ಅಲ್ಲದೇ ಪಂದ್ಯದಲ್ಲಿ ಸತತ 3 ಸಿಕ್ಸರ್ ಸಿಡಿಸಿದ ಬಳಿಕ 4ನೇ ಸಿಕ್ಸರ್ ಸಿಡಿಸಲು ಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ಚೆಂಡನ್ನು ಬ್ಯಾಟ್‍ನ ಮಧ್ಯದಲ್ಲಿ ಹೊಡೆಯಬೇಕು ಎಂಬ ಸಂಗತಿ ಬ್ಯಾಟ್ಸ್ ಮನ್ ತಲೆಯಲ್ಲಿರಬೇಕು. ಆಗ ಸಿಕ್ಸರ್ ಹೊಡೆಯಲು ಸಾಧ್ಯ ಎಂದು ವಿವರಿಸಿದ್ದರು.

Click to comment

Leave a Reply

Your email address will not be published. Required fields are marked *