ಪೋರ್ಟ್ ಎಲಿಜಬೆತ್: ಕೇವಲ ಮೂರು ಪಂದ್ಯಗಳಲ್ಲಿ ವಿಫಲವಾದ ಕಾರಣಕ್ಕೆ ಆಟಗಾರನ ಸಾಮರ್ಥ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮಾಧ್ಯಮಗಳ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿದ ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೋಹಿತ್ ಶರ್ಮಾ, ನಾನು ಕೇವಲ ಮೂರು ಪಂದ್ಯಗಳಲ್ಲಿ ಅಲ್ಪ ಮೊತ್ತಕ್ಕೆ ಔಟ್ ಆಗಿದ್ದ ಮಾತ್ರಕ್ಕೆ ಕೆಟ್ಟ ಪ್ರದರ್ಶನ ನೀಡಿದ್ದೇನೆ ಎಂದು ಹೇಗೆ ನಿರ್ಧಾರಕ್ಕೆ ಬರುತ್ತೀರಿ? ಒಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ಉತ್ತಮ ಪ್ರದರ್ಶನ ಎಂದು ಹೇಳುತ್ತಿರ ಎಂದು ಪ್ರಶ್ನಿಸಿದರು.
Advertisement
Advertisement
ತಮ್ಮ ವಿರುದ್ಧ ಟೀಕೆ ಮಾಡಿದವರಿಗೆ ಉತ್ತರಿಸಿದ ಅವರು, 2013ರಲ್ಲಿ ನನಗೆ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ಲಭಿಸಿತ್ತು. ಮಧ್ಯಮ ಕ್ರಮಾಂಕದಿಂದ ಆರಂಭಿಕನಾಗಿ ಕಣಕ್ಕೆ ಇಳಿಯುವ ವೇಳೆ ಸಾಕಷ್ಟು ಒತ್ತಡ ಎದುರಿಸಿದ್ದೆ. ಹೀಗಾಗಿ ಅಂದು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಹೆಚ್ಚು ರನ್ ಗಳಿಸಲು ಆಗಿರಲಿಲ್ಲ. ಅದು ಮುಗಿದ ಅಧ್ಯಾಯ ಎಂದರು.
Advertisement
ಯಾವುದೇ ಸರಣಿಯ ಆರಂಭಿಕ ಪಂದ್ಯಗಳಲ್ಲಿ ಎಲ್ಲಾ ಆಟಗಾರರಿಗೂ ಉತ್ತಮ ಆರಂಭ ಲಭಿಸುವುದಿಲ್ಲ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನಾನು ನೆಟ್ ನಲ್ಲಿ ಉತ್ತಮವಾಗಿ ಅಭ್ಯಾಸ ನಡೆಸಿದ್ದೆ. ಪ್ರತಿಯೊಬ್ಬ ಆಟಗಾರರನ ವೃತ್ತಿ ಜೀವನದಲ್ಲಿ ಇಂತಹ ಸನ್ನಿವೇಶಗಳು ಎದುರಾಗುತ್ತದೆ. ಕೇವಲ ಎರಡು ಅಥವಾ ಮೂರು ಪಂದ್ಯಗಳ ಪ್ರದರ್ಶನದಿಂದ ಆಟಗಾರನ ಸಾಮರ್ಥ್ಯ ನಿರ್ಧರಿಸುವುದು ಸರಿಯಲ್ಲ ಎಂದು ಹೇಳಿದರು.
Advertisement
ಹಿಂದಿನ ಪಂದ್ಯದಲ್ಲಿ ಗಳಿಸಿದ ಶತಕ ನನ್ನ ಮನೋಬಲ ಹೆಚ್ಚುವಂತೆ ಮಾಡಿದೆ. ಶತಕದ ಖುಷಿಯಲ್ಲಿ ಮೈಮರೆಯದೆ ಮುಂದಿನ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವ ಕಡೆ ಗಮನಹರಿಸಿತ್ತೆನೆ ಎಂದರು.
ಮಂಗಳವಾರ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಐದನೇ ಪಂದ್ಯದಲ್ಲಿ ರೋಹಿತ್ ಶತಕ (115 ರನ್) ಗಳಿಸಿ ಮಿಂಚಿದ್ದರು. ಏಕದಿನ ಮಾದರಿಯಲ್ಲಿ 17ನೇ ಶತಕದ ಸಾಧನೆ ಮಾಡಿದ್ದರು. ಇದಕ್ಕೂ ಮುನ್ನ ನಡೆದಿದ್ದ ನಾಲ್ಕು ಪಂದ್ಯಗಳಲ್ಲಿ (40ರನ್) ಮಾತ್ರ ಗಳಿಸಿ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ರೋಹಿತ್ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಮಾಧ್ಯಮಗಳು ‘ಮೇಕ್ ಇನ್ ಇಂಡಿಯಾ ರೋಹಿತ್’, ‘ಸ್ವದೇಶದಲ್ಲಿ ಹೀರೋ ವಿದೇಶದಲ್ಲಿ ಝೀರೋ’ ಎಂದು ಸುದ್ದಿ ಪ್ರಕಟಿಸಿ ರೋಹಿತ್ ಶರ್ಮಾ ಅವರ ಕಳಪೆ ಪ್ರದರ್ಶನವನ್ನು ಟೀಕಿಸಿತ್ತು. ಇದನ್ನೂ ಓದಿ: ರೋ`ಹಿಟ್’ ಸಿಕ್ಸರ್ ಗೆ ಸಚಿನ್ ಸಾಧನೆ ಬ್ರೇಕ್!
ರೋಹಿತ್ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ ನಾಲ್ಕನೇ ಏಕದಿನ ಪಂದ್ಯವನ್ನು ಜಯಗಳಿಸಿ 4-1 ಅಂತರದಿಂದ ಸರಣಿ ವಶಕ್ಕೆ ಪಡೆಯಿತು. ಇದರೊಂದಿಗೆ ಭಾರತದ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಜಯಿಸಿದ ಹೆಗ್ಗಳಿಕೆ ಪಡೆದುಕೊಂಡಿದೆ. ಸರಣಿಯ ಆರನೇ ಹಾಗೂ ಅಂತಿಮ ಪಂದ್ಯ ಫೆಬ್ರವರಿ 16 ರಂದು ಸೆಂಚೂರಿಯನ್ ನಲ್ಲಿ ನಡೆಯಲಿದೆ.