ಶತಕ ಸಿಡಿಸಿ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಹಿಟ್‍ಮ್ಯಾನ್

Public TV
2 Min Read
collage Rohit Sharma Don Bradmans

ಹೈದರಾಬಾದ್: ಬುಧವಾರ ಆರಂಭಗೊಂಡ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ರೋಹಿತ್ ಶರ್ಮಾ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್‍ರ ದಾಖಲೆಗೆ ಸಮಾನರಾಗಿದ್ದಾರೆ.

ಬುಧವಾರ ವೈಝಾಗ್‍ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಓಪನರ್ ಗಳಾಗಿ ಕಣಕ್ಕೆ ಇಳಿದ ರೋಹಿತ್ ಶರ್ಮಾ ಮತ್ತು ಕನ್ನಡಿಗ ಮಯಾಂಕ್ ಆಗರವಾಲ್ ಉತ್ತಮ ಆಟವಾಡಿದರು. ಆರಂಭಿಕ ಜೊತೆಯಾಟದಲ್ಲಿ ಈ ಜೋಡಿ ಮೊದಲ ದಿನದ ಅಂತ್ಯಕ್ಕೆ 202 ರನ್‍ಗಳ ಜೊತೆಯಾಟವಾಡಿತು. ಈ ಇನ್ನಿಂಗ್ಸ್‍ನಲ್ಲಿ ಶತಕ ಸಿಡಿಸಿ ಮಿಂಚಿದ ರೋಹಿತ್ ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ಸರಾಸರಿಯಲ್ಲಿ ಡಾನ್ ಬ್ರಾಡ್ಮನ್‍ರಿಗೆ ಸಮಾನದ ದಾಖಲೆ ಮಾಡಿದ್ದಾರೆ.

rohith sharma 1

ಟೆಸ್ಟ್ ಕ್ರಿಕೆಟ್‍ನ 50 ಕ್ಕೂ ಹೆಚ್ಚಿನ ಇನ್ನಿಂಗ್ಸ್ ಗಳಲ್ಲಿ ಡಾನ್ ಬ್ರಾಡ್ಮನ್ 98.22 ಸರಾಸರಿಯನ್ನು ಹೊಂದಿದ್ದರು. ಟೆಸ್ಟ್ ಕ್ರಿಕೆಟ್‍ನಲ್ಲಿ ಕಳೆದ 15 ಇನ್ನಿಂಗ್ಸ್ ನಲ್ಲಿ ರೋಹಿತ್ 4 ಶತಕ ಮತ್ತು 5 ಅರ್ಧಶತಕದೊಂದಿದೆ ಒಟ್ಟು 884 ರನ್ ಗಳಿಸಿದ್ದಾರೆ. ಇದರಲ್ಲಿ ರೋಹಿತ್ ಶರ್ಮಾ 10 ಕ್ಕೂ ಹೆಚ್ಚು ಇನ್ನಿಂಗ್ಸ್ ಗಳಲ್ಲಿ 98.22 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದು, ರೋಹಿತ್ ಶರ್ಮಾ ಬ್ರಾಡ್ಮನ್ ಅವರ ದಾಖಲೆಗೆ ಸಮಾನರಾಗಿದ್ದಾರೆ.

ಇದರ ಜೊತೆಗೆ ರೋಹಿತ್ ಶರ್ಮಾ ಇನ್ನೊಂದು ದಾಖಲೆ ಬರೆದಿದ್ದು, ಶಿಖರ್ ಧವನ್, ಕೆ.ಎಲ್ ರಾಹುಲ್ ಮತ್ತು ಪೃಥ್ವಿ ಶಾ ಅವರ ರೀತಿಯಲ್ಲಿ ಓಪನರ್ ಆಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಕ್ರಿಕೆಟ್ ಮೂರು ಮಾದರಿಯ ಪಂದ್ಯಗಳಲ್ಲಿ ಆರಂಭಿಕನಾಗಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ.

Mayank Agarwal

ಕ್ರಿಸ್ ಗೇಲ್, ಬ್ರೆಂಡನ್ ಮೆಕಲಮ್, ಮಾರ್ಟಿನ್ ಗುಪ್ಟಿಲ್, ತಿಲಕರತ್ನ ದಿಲ್ಶನ್, ಅಹ್ಮದ್ ಶೆಹಜಾದ್, ಶೇನ್ ವ್ಯಾಟ್ಸನ್, ಮತ್ತು ತಮೀಮ್ ಇಕ್ಬಾಲ್ ಅವರ ನಂತರ ರೋಹಿತ್ ಶರ್ಮಾ ಓಪನರ್ ಆಗಿ ಟೆಸ್ಟ್, ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಶತಕ ಗಳಿಸಿದ ವಿಶ್ವದ ಏಳನೇ ಬ್ಯಾಟ್ಸ್ ಮನ್ ಆಗಿದ್ದಾರೆ.

ವೈಝಾಗ್ ಟೆಸ್ಟ್ ನ ಮೊದಲ ದಿನದಲ್ಲಿ ಸೌತ್ ಅಫ್ರಿಕಾ ಬೌಲರ್ ಗಳ ಬೆವರಿಳಿಸಿದ ಭಾರತದ ಆರಂಭಿಕ ಜೋಡಿ ಔಟ್ ಆಗದೆ ದ್ವಿಶತಕದ ಜೊತೆಯಾಟವಾಡಿದರು. ಇದರಲ್ಲಿ ಶತಕ ಸಿಡಿಸಿ ಮಿಂಚಿದ ರೋಹಿತ್ ಶರ್ಮಾ 174 ಎಸೆತದಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್ ನೊಂದಿಗೆ 115 ರನ್ ಗಳಿಸಿದರೆ ಇವರಿಗೆ ಉತ್ತಮ ಸಾಥ್ ಕೊಟ್ಟ ಕನ್ನಡಿಗ ಮಯಾಂಕ್ ಆಗರವಾಲ್ 183 ಎಸೆತದದಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ನೊಂದಿಗೆ 84 ರನ್ ಸಿಡಿಸಿ ಔಟಾಗದೆ ಉಳಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *