ಬೆಂಗಳೂರು: 2024ರ ಟಿ20 ವಿಶ್ವಕಪ್ (T20 World Cup 2024) ವಿಜೇತ ಭಾರತ ತಂಡಕ್ಕೆ ಗೌರವಿಸುವ ಸಲುವಾಗಿ ವಾಂಖೆಡೆ ಮೈದಾನದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮವು ಅನೇಕ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರರು ಮಾತನಾಡಿ ಹಂಚಿಕೊಂಡರು. ಈ ವೇಳೆ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ರೋಹಿತ್ ಶರ್ಮಾ ಇಡೀ ದೇಶಕ್ಕೆ ಸಮರ್ಪಿಸಿದರು.
ನಾಯಕ ರೋಹಿತ್ ಶರ್ಮಾ ಮಾತನಾಡಿ ಮುಂಬೈ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. ಜೊತೆಗೆ ತಂಡದ ಪ್ರತಿಯೊಬ್ಬ ಆಟಗಾರನ ಶ್ರಮವನ್ನು ಗುಣಗಾನ ಮಾಡಿದರು. ಅಷ್ಟೇ ಅಲ್ಲದೇ ಈ ಗೆಲುವಿನಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಕೊಡುಗೆಯನ್ನು ಸ್ಮರಿಸಿದರು. ಇದನ್ನು ಕೇಳಿದ ಪಾಂಡ್ಯ ಮೈದಾನದಲ್ಲೇ ಕಣ್ಣೀರಿಟ್ಟರು. ಕೊನೇ ಓವರ್‌ನ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ ಅವರನ್ನು ಔಟ್ ಮಾಡಿದ್ದೇ ಗೆಲುವಿಗೆ ದೊಡ್ಡ ತಿರುವು ಕೊಟ್ಟಿತು ಎಂದು ರೋಹಿತ್ ಗುಣಗಾನ ಮಾಡಿದರು.
ಅಷ್ಟೇ ಅಲ್ಲ, ಭಾರತೀಯ ಕ್ರಿಕೆಟ್ ತಂಡವನ್ನು ಸ್ವಾಗತಿಸಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಅವರು ಈ ಟಿ20 ವಿಶ್ವಕಪ್ ಪ್ರಶಸ್ತಿಗಾಗಿ ಆಟಗಾರರಂತೆ ಹಪಹಪಿಸುತ್ತಿದ್ದರು. ಇಂದು ಎಲ್ಲರ ಕನಸು ನನಸಾಗಿದೆ. ಈ ವಿಶ್ವಕಪ್ ನಮ್ಮ ಗೆಲುವಲ್ಲ, ದೇಶದ ಗೆಲುವು, ದೇಶದ ಪ್ರತಿಯೊಬ್ಬರಿಗೂ ಸೇರಿದ್ದು ಎಂದು ಭಾವುಕರಾದರು.
ಇದೇ ವೇಳೆ ಮಾತನಾಡಿದ ನಿರ್ಗಮಿತ ಕೋಚ್ ರಾಹುಲ್ ದ್ರಾವಿಡ್, ನಾನು ಈ ಪ್ರೀತಿಯನ್ನು ಕಳೆದುಕೊಳ್ಳಲಿದ್ದೇನೆ, ರಾತ್ರಿ ಬೀದಿಗಳಲ್ಲಿ ನಾನು ಕಂಡದ್ದನ್ನು ನಾನು ಮರೆಯುವುದಿಲ್ಲ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಕೊಹ್ಲಿಯೂ ಭಾವುಕ:
ರೋಹಿತ್ ಬಳಿಕ ಮಾತನಾಡಿದ ಕಿಂಗ್ ಕೊಹ್ಲಿ, ನನ್ನ 15 ವರ್ಷಗಳ ವೃತ್ತಿಜೀವನದಲ್ಲಿ ರೋಹಿತ್ ಇಷ್ಟೊಂದು ಭಾವುಕರಾಗಿರುವುದನ್ನು ನಾನು ನೋಡಿಲ್ಲ. ನಾನು ಡ್ರೆಸ್ಸಿಂಗ್ ರೂಮ್‌ಗೆ ಹೋಗುತ್ತಿದ್ದೆ ಮತ್ತು ರೋಹಿತ್ ಹೊರಗೆ ಬರುತ್ತಿದ್ದರು. ಇಬ್ಬರೂ ಭಾವುಕರಾಗಿ ಪರಸ್ಪರ ಅಪ್ಪಿಕೊಂಡೆವು. ಆ ಕ್ಷಣ ನನಗೆ ವಿಶೇಷವಾಗಿತ್ತು ಎಂದು ಹೇಳಿದರು.
2007 ಅಥವಾ 2011ರಲ್ಲಿ ನಾವು ವಿಶ್ವಕಪ್ ಗೆದ್ದಾಗ ಹಿರಿಯ ಆಟಗಾರರು ತುಂಬಾ ಅಳುತ್ತಿದ್ದರು. ಆದರೆ ನಾನು ಅವರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ. ಖುಷಿಯ ಸಂದರ್ಭದಲ್ಲಿ ಅವರೆಲ್ಲಾ ಯಾಕೆ ಇಷ್ಟೊಂದು ಭಾವುಕರಾಗುತ್ತಿದ್ದಾರೆ ಎಂದು ಆಶ್ಚರ್ಯ ಪಡುತ್ತಿದ್ದೆ. ಆದರೆ ಈಗ ನನಗೆ ಅರ್ಥವಾಯಿತು. ನಾನಿರಲಿ ಅಥವಾ ರೋಹಿತ್ ಆಗಿರಲಿ, ಇಬ್ಬರೂ ಬಹುಕಾಲ ಟ್ರೋಫಿ ಗೆಲ್ಲುವುದರಲ್ಲಿ ನಿರತರಾಗಿದ್ದರು. ಮೊದಲು ನನ್ನ ನಾಯಕತ್ವದಲ್ಲಿ ಮತ್ತು ನಂತರ ರೋಹಿತ್ ನಾಯಕತ್ವದಲ್ಲಿ. ನಾವಿಬ್ಬರೂ ಈ ಟ್ರೋಫಿ ಗೆಲ್ಲಲು ಹತಾಶರಾಗಿದ್ದೆವು. ಈಗ ನಾವು ಗೆದ್ದಿರುವುದು ನಮಗೆ ವಿಶೇಷ. ಗೆದ್ದು ಮತ್ತೆ ವಾಂಖೆಡೆಗೆ ಬರುವುದು ನಮ್ಮ ಪಾಲಿಗೆ ವಿಶೇಷವಾಗಿದೆ ಎಂದು ಹಳೆಯ ನೆನಪುಗಳನ್ನು ಮೆಲುಕುಹಾಕಿದರು.