ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭರ್ಜರಿ ಕಂಬ್ಯಾಕ್ ಮಾಡಿರುವ ಹಿಟ್‌ಮ್ಯಾನ್ ರೋಹಿತ್ ಶರ್ಮಾ (Rohit Sharma) 3ನೇ ಏಕದಿನ ಪಂದ್ಯದಲ್ಲಿ 20,000 ಅಂತಾರಾಷ್ಟ್ರೀಯ ರನ್ ಗಡಿ ದಾಟಿದ್ದು, ಕ್ರಿಕೆಟ್ ಇತಿಹಾಸ ಪುಟದಲ್ಲಿ ತಮ್ಮ ಹೆಸರು ದಾಖಲಾಗುವಂತೆ ಮಾಡಿದ್ದಾರೆ.
ಹೌದು. 3ನೇ ಪಂದ್ಯದಲ್ಲಿ ಭರ್ಜರಿ ಫಿಫ್ಟಿ ಬಾರಿದ ರೋಹಿತ್ ಶರ್ಮಾ ಮೂರು ಮಾದರಿಗಳಿಂದ 20 ರನ್‌ಗಳ ಗಡಿ ದಾಟಿದರು. ಇದರೊಂದಿಗೆ ಭಾರತದ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ನಂತರ ಈ ಗಣನೀಯ ಸಾಧನೆ ಮಾಡಿದ 4ನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾದರು.
ದಕ್ಷಿಣ ಆಫ್ರಿಕಾ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ (ODI Match) 271 ರನ್‌ಗಳ ಗುರಿ ಬೆನ್ನಟ್ಟುವಾಗ ರೋಹಿತ್ ಶರ್ಮಾ 27 ರನ್ ಗಳಿಸಿದಾಗ ಈ ಮಹತ್ವದ ಮೈಲಿಗಲ್ಲು ತಲುಪಿದರು. ಪಂದ್ಯದಲ್ಲಿ ಅವರು ಔಟಾಗುವ ಮುನ್ನ 73 ಎಸೆತಗಳನ್ನು ಎದುರಿಸಿ 7 ಬೌಂಡರಿ ಮತ್ತು 3 ಸಿಕ್ಸರ್ ಗಳನ್ನು ಒಳಗೊಂಡ 75 ರನ್ ಗಳಿಸಿದ್ದರು.
18 ವರ್ಷಗಳ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಮೂರೂ ಮಾದರಿಗಳಲ್ಲಿ ಆಡಿರುವ 538 ಇನ್ನಿಂಗ್ಸ್‌ಗಳಲ್ಲಿ 42.40ರ ಸರಾಸರಿಯಲ್ಲಿ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ 14ನೇ ಆಟಗಾರರೂ ಆಗಿದ್ದಾರೆ. ಇನ್ನೂ ದೇಶಿಯ ಮತ್ತು ಅಂತಾರಾಷ್ಟ್ರೀಯ ಎರಡೂ ವಿಭಾಗದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರೇ ಅಗ್ರಸ್ಥಾನದಲ್ಲಿದ್ದಾರೆ.
ಅತಿಹೆಚ್ಚು ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ ಭಾರತೀಯರು
* ಸಚಿನ್ ತೆಂಡೂಲ್ಕರ್ – 34,357 ರನ್
* ವಿರಾಟ್ ಕೊಹ್ಲಿ – 27,975 ರನ್
* ರಾಹುಲ್ ದ್ರಾವಿಡ್ – 24,064 ರನ್
* ರೋಹಿತ್ ಶರ್ಮಾ – 20,048 ರನ್
* ಸೌರವ್ ಗಂಗೂಲಿ – 18,433 ರನ್



