ಮಂಡ್ಯ: ಲೋಕಸಭಾ ಚುನಾವಣೆಯ ಕೊನೆಯ ಬಹಿರಂಗ ಸಮಾವೇಶದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ನಟ ಯಶ್ ಮತಯಾಚನೆ ಮಾಡಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ಯಶ್ ಅವರು, ಇಂದು ನಾನು ಕಡಿಮೆ ಮಾತನಾಡುತ್ತೇನೆ. ಕಾರಣ ನಾವು ಮೊದಲು ಬಂದಾಗ ಕೆಲವರು ಅನುಮಾನದಿಂದ ಇದ್ದರು. ಆದರೆ ಜನರು ಮಾತ್ರ ನಂಬಿಕೆ ಇಟ್ಟಿದ್ದರು. ಅವತ್ತು ಜನಸಾಗರ, ಇವತ್ತು ಜನಸಾಗರ ಬಂದಿದೆ. ಮಧ್ಯೆದಲ್ಲಿ ಅನೇಕ ಘಟನೆಗಳು ನಡೆದಿವೆ. ಎಲ್ಲವನ್ನು ನೋಡಿದ್ದೀರಿ. ಇಲ್ಲಿ ನಡೆಯುತ್ತಿರುವುದು ಚುನಾವಣೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರ್ ಬೇಕಾದರೂ ಚುನಾವಣೆಗೆ ನಿಂತುಕೊಳ್ಳಬಹುದು ಎಂದರು.
Advertisement
ಒಬ್ಬ ಹೆಣ್ಣು ಮಗಳು, ನಿಮ್ಮೂರಿನ ಸೊಸೆ ಚುನಾವಣೆಗೆ ನಿಂತ ತಕ್ಷಣ ಇಷ್ಟೊಂದು ದ್ವೇಷವನ್ನು ನಾನು ಕಂಡಿಲ್ಲ. ಈ ಹಿಂದೆಯೂ ಅಂಬಿ ಅಣ್ಣ ಚುನಾವಣೆಗೆ ನಿಂತಾಗ ಪ್ರಚಾರ ಮಾಡಿದ್ದೇನೆ. ಆದರೆ ಯಾರು ನಮ್ಮನ್ನು ಇಷ್ಟು ಕೆಟ್ಟದಾಗಿ ನಡೆಸಿಕೊಂಡಿಲ್ಲ. ಇದರಿಂದ ನನಗೆ ಚುನಾವಣೆ ಯಾವುದರಿಂದ ನಡೆಯುತ್ತದೆ ಎಂಬ ಅನುಮಾನ ಬಂದಿದೆ ಎಂದು ಯಶ್ ಹೇಳಿದರು.
Advertisement
Advertisement
ನಾನು ಪಂಚಿಂಗ್ ಡೈಲಾಗ್ ಹೊಡೆಯುವದಿಲ್ಲ. ಅಂದಿನಿಂದಲೂ ಎಲ್ಲರೂ ತಾಳ್ಮೆಯಿಂದ ಇರೋಣ ಎಂದು ಹೇಳುತ್ತಿದ್ದರು. ಅದೇ ರೀತಿ ಪ್ರಚಾರ ಮಾಡಿದ್ದೇವೆ. ಆದರೆ ನಮ್ಮ ರಕ್ತ ಕೇಳಲ್ವೇ, ಸ್ವಲ್ಪ ಕುದಿಯುತ್ತಿತ್ತು. ನಮಗೆ ಎಲ್ಲರ ಮೇಲೂ ಗೌರವವಿದೆ. ಆದರೆ ನಮ್ಮ ಮನೆ ಹೆಣ್ಣು ಮಗಳ ಮೇಲೆ ಮಾತನಾಡಿದ್ರೆ, ಅವರು ಯಾರು ಅಂತನೂ ನೋಡಲ್ಲ, ಯಾವ ಸ್ಥಾನದಲ್ಲಿದ್ದರು, ಎಷ್ಟೇ ಶಕ್ತಿಶಾಲಿ ಆಗಿದ್ರೂ ನೋಡಲ್ಲ. ಅದನ್ನು ನೋಡಿಕೊಂಡು ಕುಳಿತುಕೊಂಡರೆ ನಾವು ಮನುಷ್ಯರಾಗಲ್ಲ ಎಂದು ಯಶ್ ಗುಡುಗಿದರು.
Advertisement
ಸ್ವಾಭಿಮಾನ:
ಈ ಚುನಾವಣೆ ಸ್ವಾಭಿಮಾನದ ಚುನಾವಣೆ ಎಂದು ಹೇಳುತ್ತಿದ್ದಾರೆ. ಆದರೆ ಕೆಲವರು ಸ್ವಾಭಿಮಾನವನ್ನು ಲೇವಡಿ ಮಾಡುತ್ತಿದ್ದಾರೆ. ಸ್ವಾಭಿಮಾನ ಇರುವವರೇ ಇಂದು ಇಲ್ಲಿಗೆ ಬಂದು ನಿಂತಿದ್ದಾರೆ. 500 ರೂ. ಮೊಬೈಲ್ ಆಫರ್ ಕೊಟ್ಟವರು ಇಂದು ಇಲ್ಲಿಗೆ ಬಂದಿಲ್ಲ. ಆಫರ್ ಕೊಟ್ಟರೆ ಬಿಸಿಲಿದೆ ಟೋಪಿ ಕೊಡಿ, ಕುಡಿಯಲು ನೀರು ಕುಡಿ ಹಾಗೂ ಮೊದಲು ನಮ್ಮ ಹಣ ಕೊಡಿ ಎಂದು ಕೇಳುತ್ತಾರೆ. ಆದರೆ ಇಂದು ಜನರು ಬೆವರು ಸುರಿಸಿ ದುಡಿದಿದ್ದ ಹಣವನ್ನು ಅಕ್ಕ ಅವರಿಗೆ ತಂದು ಕೊಡುತ್ತಿದ್ದರು. ಅದರಲ್ಲಿ ಅವರ ಬೆವರಿದೆ. ದುಡ್ಡು ಇರೋರಿಗೆ ಸ್ವಾಭಿಮಾನ ಎಂದರೇನು ಅಂತಾ ತೋರಿಸಿ. ಯಾರು ಏನೇ ಹೇಳಿದರೂ ಈ ಅಭಿಮಾನ ಸುಳ್ಳು ಎಂದರೆ ನಾನು ಒಪ್ಪಲ್ಲ ಎಂದರು.
ನಾನು ಕಳ್ಳರ ಪಕ್ಷ ?
ಯಾವುತ್ತು ಸುಳ್ಳು ಹೇಳಬಾರದು. ಇವರು ಚುನಾವಣೆಗೆ ನಿಲ್ಲುವುದಕ್ಕೂ ಮುನ್ನ ಅಣ್ಣ-ತಮ್ಮಂದಿರಂತೆ ಇದ್ದರು. ನಂತರ ನಾನು ಕಳ್ಳರ ಪಕ್ಷ ಅಂತ ಹೇಳಿದ್ದೇನೆ ಎಂದು ಹೇಳಿದ್ದಾರೆ. ನಾನು ತುಂಬಾ ನಂಬುವ ದೇವರಾದ ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ ಹೇಳುತ್ತೇನೆ, ನಾನು ಕಳ್ಳರ ಪಕ್ಷ ಎಂದು ಹೇಳಿದ್ರೆ ಅವರು ಏನು ಹೇಳಿದರೂ ಕೇಳುತ್ತೇನೆ. ಬೇಕಾದರೆ ಈ ಮಂಡ್ಯ, ಕರ್ನಾಟಕ ಬಿಟ್ಟು ಹೋಗುತ್ತೇನೆ. ಎಲ್ಲರೂ ಅಣ್ಣ-ತಮ್ಮಂದಿರ ರೀತಿ ಇದ್ದೀವಿ. ಒಂದು ವೇಳೆ ನಾನು ಕಳ್ಳರ ಪಕ್ಷ ಅಂತ ಹೇಳಿರುವ ಒಂದು ಸಾಕ್ಷಿ ಇದ್ದರೆ ತೋರಿಸಲಿ ಎಂದು ಹೇಳಿದರು.
ನಾವು ಕಲಾವಿದರು ಎಲ್ಲರ ಆಸ್ತಿ. ಈ ಮಾತು ಅವರ ಘನತೆಗೆ ಸರಿಯಲ್ಲ. ನಾವು ಅವರ ಘನತೆ, ಕುಟುಂಬಕ್ಕೆ ಗೌರವ ಕೊಡುತ್ತೇವೆ. ಇಲ್ಲಿಗೆ ಸಾಕು ಅಣ್ಣ ಇನ್ನೂ ನೋಯಿಸಬೇಡಿ, ನಮ್ಮ ಕೈಯಲ್ಲಿ ತಡೆದುಕೊಳ್ಳಲು ಸಾಧ್ಯವಿಲ್ಲ. ಇನ್ನೂ ಮುಂದೆ ಜನರು ತೀರ್ಮಾನ ಮಾಡುತ್ತಾರೆ. ನಿಮ್ಮನ್ನು ನಂಬಿ ಅವರು ಬಂದಿದ್ದಾರೆ. ನೀವೇ ಅವರನ್ನು ಆಶೀರ್ವದಿಸಿ ಕಾಪಾಡಬೇಕು.
ನೀವು ನಿಮ್ಮ ಮನಸಾಕ್ಷಿ ಕೇಳಿ ಈ ಕುಟುಂಬಕ್ಕೆ ಒಂದು ಅವಕಾಶ ಮಾಡಿಕೊಡಿ. ಇದೆಲ್ಲವನ್ನು ಅಂಬರೀಶ್ ಅಣ್ಣ ಮೇಲೆ ನೋಡುತ್ತಿದ್ದಾರೆ. ಇಲ್ಲಿವರೆಗೂ ನಾವು ಕೆಲಸ ಮಾಡಿದ್ದೇವೆ. ಇನ್ನು ಮುಂದೆ ನೀವು ಕೆಲಸ ಮಾಡಿ. ಅವರು ನಿಮ್ಮ ಆಸ್ತಿ, ಅಭಿ ಮಂಡ್ಯದ ಸ್ವತ್ತು. ಕ್ರಮಸಂಖ್ಯೆ 20 ಕಹಳೆ ಊದುತ್ತಿರುವ ಗುರುತಿಗೆ ವೋಟ್ ಹಾಕಿ ಎಂದು ಯಶ್ ಮನವಿ ಮಾಡಿಕೊಂಡರು.