ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ‘ಟಾಕ್ಸಿಕ್’ (Toxic Film) ಸಿನಿಮಾ ತಂಡಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ನಿರ್ಮಾಪಕರ ವಿರುದ್ಧ ಹಾಕಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ (High Court) ಮಧ್ಯಂತರ ತಡೆ ನೀಡಿದೆ. ಇದನ್ನೂ ಓದಿ:Pushpa 2: ಅಲ್ಲು ಅರ್ಜುನ್ ಸಿನಿಮಾದಲ್ಲಿ ಕನ್ನಡ ಕಲಾವಿದರ ದಂಡು
‘ಟಾಕ್ಸಿಕ್’ ಸಿನಿಮಾದ ಸೆಟ್ ನಿರ್ಮಾಣಕ್ಕಾಗಿ ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ ಎಂದು ಕೆವಿಎನ್ ಸಂಸ್ಥೆ ಮತ್ತು ಮಾನ್ ಸ್ಟರ್ ಕ್ರಿಯೆಷನ್ಸ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇಂದು (ಡಿ.5) ಈ ಅರ್ಜಿ ವಿಚಾರಣೆ ಮಾಡಿದ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ‘ಟಾಕ್ಸಿಕ್’ ಸಿನಿಮಾ ನಿರ್ಮಾಪಕರ ವಿರುದ್ಧ ಎಫ್‌ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಅರ್ಜಿದಾರರ ವಾದ ಏನಿತ್ತು?
‘ಟಾಕ್ಸಿಕ್’ ಚಿತ್ರತಂಡ ಸೆಟ್ ಹಾಕಿದ ಜಾಗವನ್ನು 1963ರಲ್ಲೇ ರಾಜ್ಯ ಸರ್ಕಾರ ಹೆಚ್ ಎಂಟಿ ಸಂಸ್ಥೆಗೆ ನೀಡಿದೆ. ಆಗ ಒಟ್ಟು 400 ಎಕರೆ ಭೂಮಿಯನ್ನು ಹೆಚ್‌ಎಂಟಿ ಸಂಸ್ಥೆಗೆ ನೀಡಲಾಗಿತ್ತು. ಈ ಜಮೀನಿನ ಪೈಕಿ 18 ಎಕರೆಯನ್ನು ಕೆನರಾ ಬ್ಯಾಂಕ್‌ಗೆ ಹೆಚ್‌ಎಂಟಿ ಸಂಸ್ಥೆಯು ಮಾರಾಟ ಮಾಡಿದೆ. ಕೆನರಾ ಬ್ಯಾಂಕ್‌ನಿಂದ ಲೀಸ್ ಪಡೆದು ‘ಟಾಕ್ಸಿಕ್’ ಸಿನಿಮಾ ತಂಡ ಇಲ್ಲಿ 30 ಕೋಟಿ ರೂ. ಹೂಡಿಕೆ ಮಾಡಿ ಸಿನಿಮಾ ಸೆಟ್ ಹಾಕಲಾಗಿದೆ. ಸರ್ಕಾರವೇ ಇದು ಅರಣ್ಯ ಭೂಮಿಯಲ್ಲವೆಂದು ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಶೂಟಿಂಗ್ ಸೆಟ್ ನಿರ್ಮಾಣಕ್ಕೆ ಇಲ್ಲಿ ಯಾವುದೇ ಮರಗಳನ್ನು ಕಡಿದಿಲ್ಲ ಎಂದು ‘ಟಾಕ್ಸಿಕ್’ ಚಿತ್ರ ನಿರ್ಮಾಪಕರ ಪರ ವಕೀಲ ಬಿಪಿಎನ್ ಹೆಗ್ಡೆ ವಾದಿಸಿದರು.
ಅರ್ಜಿದಾರರ ವಾದ ಆಲಿಸಿದ ಕೋರ್ಟ್ ಇದು ‘ಟಾಕ್ಸಿಕ್’ 1, 2, 3 ತೆಗೆಯೋಕೆ ಶಾಶ್ವತ ಸೆಟ್ ಹಾಕಿದ್ದೀರಾ ಎಂದು ಪ್ರಶ್ನಿಸಿ ಎಫ್‌ಆರ್‌ಗೆ ಕೋರ್ಟ್ ಮಧ್ಯಂತರ ತಡೆ ನೀಡಿತು.