ಮಂಡ್ಯ: ದುರಹಂಕಾರ ಮಾಡಬೇಡಿ, ಜನರೇ ನಿಮ್ಮ ದುರಹಂಕಾರಕ್ಕೆ ಬುದ್ಧಿ ಕಲಿಸುತ್ತಾರೆ ಎಂದು ರಾಕಿಂಗ್ ಸ್ಟಾರ್ ಯಶ್ ಸಂಸದ ಶಿವರಾಮೇಗೌಡರಿಗೆ ತಿರುಗೇಟು ನೀಡಿದ್ದಾರೆ.
ಪ್ರಚಾರದ ವೇಳೆ ಮಾತನಾಡಿದ ಯಶ್, ನಾಲಿಗೆ ಇದೆ ಎಂದು ಮನುಷ್ಯ ಹರಿಬಿಡಬಾರದು. ಒಂದು ಹೆಣ್ಣಿಗೆ ಎಲ್ಲಿ ಗೌರವ ಇರುತ್ತೋ ಅಲ್ಲಿ ಸಮಾಜ ಚೆನ್ನಾಗಿರುತ್ತೆ. ಅಂಬರೀಶಣ್ಣ ಇದ್ದಿದ್ರೆ ಬೆರಳು ತೋರಿಸುವುದಕ್ಕೆ ಯಾರಿಗಾದರೂ ತಾಕತ್ತು ಇರುತಿತ್ತಾ ಎಂದು ಪ್ರಶ್ನೆ ಮಾಡುತ್ತೇನೆ. ಅವರು ಇಲ್ಲ ಎಂದಾಕ್ಷಣ ಈ ರೀತಿ ಬಾಯಿ ಬಂದಂತೆ ಮಾತನಾಡಬಹುದು. ಅವರಿಗೆ ಕೇಳುವವರು ಯಾರು ಇಲ್ಲ ಎಂದು ಅಂದುಕೊಂಡರೆ ಅದನ್ನು ಅವರು ಬಿಟ್ಟು ಬಿಡಲಿ. ಏಕೆಂದರೆ ನಾವೆಲ್ಲಾ ಇದ್ದೇವೆ ಎಂದು ಕಿಡಿಕಾರಿದರು.
Advertisement
Advertisement
ಎಲ್ಲರ ಮನೆಯಲ್ಲೂ ಹೆಣ್ಣು ಮಕ್ಕಳು ಇದ್ದಾರೆ. ಯಾರ ಮನೆಯಲ್ಲೂ ಹೆಣ್ಣು ಮಕ್ಕಳು ಇಲ್ಲದೇ ಇರುವುದಿಲ್ಲ. ನಮ್ಮ ಮನೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವ ಮೊದಲು ಅವರು ತಮ್ಮ ಮನೆ ಹೆಣ್ಣು ಮಕ್ಕಳನ್ನು ನೆನಪಿಸಿಕೊಳ್ಳಲಿ. ಆ ರೀತಿ ಮಾತನಾಡಬಾರದು. ಏಕೆಂದರೆ ಅಂಬರೀಶಣ್ಣ ಅಭಿಮಾನಿ ಕರ್ನಾಟಕದಾದ್ಯಂತ ಎಲ್ಲ ಕಡೆ ಇದ್ದಾರೆ. ಮಂಡ್ಯದ ಮನೆ ಮನೆಯಲ್ಲೂ ಇದ್ದಾರೆ. ಅಣ್ಣ ಇಲ್ಲ ಎಂದಾಕ್ಷಣ ಅವರ ಮನೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದ್ರೆ, ಅದನ್ನು ನೋಡಿಕೊಂಡು ಸುಮ್ಮನೆ ಇರುವುದಕ್ಕೆ ಆಗುವುದಿಲ್ಲ. ದಯವಿಟ್ಟು ಅಂತಹ ಮಾತುಗಳನ್ನು ಮಾತನಾಡಬೇಡಿ ಎಂದರು.
Advertisement
Advertisement
ಎಲ್ಲರ ಸಂಬಂಧ ಚೆನ್ನಾಗಿರುತ್ತೆ. ಆದರೆ ಚುನಾವಣೆ ಬಂದಾಗ ಈ ರೀತಿ ಮಾತನಾಡುವುದು ಸರಿಯಲ್ಲ. ಎಲ್ಲರೂ ಕಾವೇರಿ ನೀರು ಕುಡಿದು ಬೆಳೆದವರು. ಸ್ವಲ್ಪ ಮಾನವೀಯತೆಯಿಂದ ಮಾತನಾಡಿ. ಮಾಯಾಂಗನೆ ಎಂದ್ರೆ ಏನರ್ಥ? ಹೆಣ್ಣು ಮಕ್ಕಳು ಚುನಾವಣೆಗೆ ನಿಲ್ಲುವುದೇ ತಪ್ಪಾ? ಅವರು ಈ ಊರಿನ ಸೊಸೆಯಾಗಿ, ಅವರ ಪತಿ ಕ್ಷೇತ್ರದಲ್ಲಿ ಹೋರಾಡುತ್ತೇನೆ ಎಂದು ಚುನಾವಣೆಗೆ ಬಂದಿದ್ದಾರೆ. ಆ ಹೆಣ್ಣು ಮಕ್ಕಳು ಚುನಾವಣೆಗೆ ನಿಂತಿರುವುದೇ ತಪ್ಪು ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಮಂಡ್ಯ ಜನತೆ ಇದನ್ನು ನೋಡಿ ಸುಮ್ಮನಿರಲ್ಲ. ದುರಂಹಕಾರ ಮಾಡಬೇಡಿ, ದುರಹಂಕಾರಕ್ಕೆ ಜನರೇ ಬುದ್ಧಿ ಕಲಿಸುತ್ತಾರೆ. ನಿಮ್ಮ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ. ಅದನ್ನು ಬಿಟ್ಟು ಎದುರುಗಡೆ ಅಭ್ಯರ್ಥಿಗೆ ಮಾಯಾಂಗನೆ ಎಂದರೆ ತಪ್ಪು ಎಂದರು.
ಅವರ ತಲೆಯಲ್ಲಿ ಎನೋ ಸಮಸ್ಯೆ ಆಗಿದೆ ಅನ್ಸುತ್ತೆ. ನಮ್ಮ ಊರಿನಲ್ಲಿ ಬಸ್ ಬಂದಾಗ ಜನರು ಕಿಟಕಿಯಿಂದ ಕರ್ಚಿಫ್ ಹಾಕುತ್ತಾರೆ. ಯಾರಾದರೂ ಬಂದು ಕುಳಿತುಕೊಳ್ಳುತ್ತಾರೆ ಎಂದು ಕರ್ಚಿಫ್ ಹಾಕುತ್ತಾರೆ. ಆಗ 6 ತಿಂಗಳು ಒಬ್ಬರು ಒಂದು ಕರ್ಚಿಫ್ ಹಾಕಿದ್ರು. ಈಗ ಈ ಕರ್ಚಿಫ್ ಸೈಲಂಟಾಗಿ ಇರಬೇಕು. ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದ್ರೆ, ನಾವು ಮಾತನಾಡಬೇಕಾಗುತ್ತದೆ. ಕರ್ಚಿಫ್ ಆಗಿ ನೀಟಾಗಿ ಇದ್ರೆ ಸರಿ. ಇಲ್ಲವೆಂದರೆ ಜನ ಕರ್ಚಿಫ್ ಯ್ಯೂಸ್ ಮಾಡಿ ಬಿಸಾಕುತ್ತಾರೆ. ಅದು ಅವರಿಗೆ ಬೇಸರವಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಶಿವರಾಮೇಗೌಡರಿಗೆ ತಿರುಗೇಟು ನೀಡಿದರು.
ಟೂರಿಂಗ್ ಟಾಕೀಸ್ ಬಗ್ಗೆ ಯೋಚನೆ ಮಾಡಿ. ಅವರ ಟೂರ್ 6 ತಿಂಗಳಿಗೆ ನಿಂತು ಹೋಗಿದೆ. ನಮ್ಮ ಟೂರ್ ಜೀವನಪರ್ಯಂತ ನಡೆಯುತ್ತಲೇ ಇರುತ್ತೆ. ಟೂರಿಂಗ್ ಟಾಕೀಸ್ ಎಂದರೆ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವುದು. ನಾವು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲ್ಲ. ಒಂದು ಪಕ್ಷ ಬಿಟ್ಟು ಇನ್ನೊಂದು ಪಕ್ಷಕ್ಕೆ ಜಂಪಿಂಗ್ ಮಾಡಿಕೊಂಡು ಜಂಪಿಂಗ್ ಸ್ಟಾರ್ ಅಲ್ಲ. ಅವರು ಟೂರಿಂಗ್ ಟಾಕೀಸ್ ಏನ್ ಬೇಕಾದರೂ ಅಂದುಕೊಳ್ಳಿ. ಜನರು ನೋಡುತ್ತಿದ್ದಾರೆ. ಅಲ್ಲದೆ ಸುಮಲತಾ ಅವರು ಕೆಲಸ ಮಾಡಲು ಬಂದಿದ್ದಾರೆ. ನಾವು ಸಿನಿಮಾ ಮಾಡುತ್ತಿದ್ದೇವೆ. ಈಗ ಮನೆಮಕ್ಕಳಾಗಿ ಬಂದಿದ್ದೇವೆ. 18ರಂದು ಸುಮಲತಾ ಅವರು ಓಡಿ ಹೋಗುವುದಿಲ್ಲ. ಅವರು ಓಡಿಸುತ್ತಾರೆ ಎಂದು ಯಶ್ ಸಂಸದ ಶಿವರಾಮೇಗೌಡ ಹೇಳಿಕೆಗೆ ಖಡಕ್ ಆಗಿ ಪ್ರತಿಕ್ರಿಯಿಸಿದರು.