ಬೆಂಗಳೂರು: ರಾಜ್ಯದ ಯಾವುದೇ ಮೂಲೆಯಲ್ಲಿ ಸ್ಪರ್ಧೆ ಮಾಡಿದ್ರೂ ಗೆಲ್ತೀನಿ ಎಂದು ರಾಜಕೀಯಕ್ಕೆ ಬರುವ ಮುನ್ಸೂಚನೆಯನ್ನ ನಟ ರಾಕಿಂಗ್ ಸ್ಟಾರ್ ಯಶ್ ನೀಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ವಿ ನಾಗರಾಜು ಪರ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿದ್ದಾರೆ. ಪಟ್ಟಣದ ವೀವರ್ಸ್ ಕಾಲೋನಿಯಿಂದ ಆರಂಭಗೊಂಡ ರೋಡ್ ಶೋ ಸರ್ಕಾರಿ ಬಸ್ ನಿಲ್ದಾಣದ, ಮುಖ್ಯ ಸರ್ಕಲ್ ವರೆಗೂ ಸಾಗಿತು. ಇದನ್ನೂ ಓದಿ: ನಟರನ್ನು ಬಚ್ಚಾ ಎಂದಿದ್ದ ಶಾಸಕ ತಿಪ್ಪೇಸ್ವಾಮಿಗೆ ಯಶ್ ತಿರುಗೇಟು
ಈ ವೇಳೆ ಮಾತನಾಡಿದ ನಟ ಯಶ್, ನೆಲಮಂಗಲ ತಾಲೂಕಿನಲ್ಲಿರುವ 56 ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿ ಮಾಡಿ ಮತ್ತೆ ಕೆರೆಗಳನ್ನು ತುಂಬಿಸುತ್ತೇನೆ ಎಂಬ ಉತ್ಸಾಹದಲ್ಲಿ ಮಾಜಿ ಶಾಸಕ ನಾಗರಾಜು ಅವರಿದ್ದಾರೆ. ಹೀಗಾಗಿ ನಾನು ನಾಗರಾಜ್ ಪರ ಮತಯಾಚನೆ ಮಾಡಲು ಬಂದಿದ್ದೇನೆ ಎಂದರು.
ಒಂದು ವೇಳೆ ನಾಗರಾಜ್ ಗೆದ್ದ ಮೇಲೆ ಕೆರೆಗಳನ್ನು ಅಭಿವೃದ್ಧಿ ಮಾಡದೇ ಇದ್ದರೆ, ನಾನೇ ಖುದ್ದು ಜನರ ಮಧ್ಯೆ ಕೂತು ಪ್ರತಿಭಟನೆ ಮಾಡುತ್ತೇನೆ ಎಂದು ಮತದಾರರಿಗೆ ಭರವಸೆ ನೀಡಿದರು.
ಇದೇ ವೇಳೆ ಯಶ್ ರಾಜಕೀಯ ಪ್ರವೇಶ ಕುರಿತ ಹೇಳಿಕೆಯನ್ನು ತಮ್ಮ ಸಿನಿಮಾ ಡೈಲಾಗ್ ಮೂಲಕವೇ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಎಂಎಲ್ಎ, ಎಂಪಿ ಮಿನಿಸ್ಟರ್ ಆಗಬೇಕಾದರೆ ನಾನು ತಲೆಕೆಡಿಸಿಕೊಳ್ಳಬೇಕಿಲ್ಲ. ಕರ್ನಾಟಕ ಯಾವುದೇ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡಿದರೂ ಚುನಾವಣೆಯಲ್ಲಿ ಜನ ನನ್ನನ್ನು ಗೆಲ್ಲಿಸುತ್ತಾರೆ. ಜನರು ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವಷ್ಟು ಅಭಿಮಾನ ಇಟ್ಟಿದ್ದಾರೆ. ಈ ಅಭಿಮಾನವೇ ಚುನಾವಣೆಯಲ್ಲಿ ಗೆಲ್ಲಿಸುತ್ತೆ ಅಂತ ಪರೋಕ್ಷವಾಗಿ ರಾಜಕೀಯ ಪ್ರವೇಶದ ಬಗ್ಗೆ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ನಾಗರಾಜು ಮಾತನಾಡಿ ಯಶ್ ಬಂದ ಮೇಲೆ ನನಗೆ ಆನೆ ಬಲ ಬಂದಂತಾಗಿದೆ ಎಂದ್ರು.