Connect with us

Bengaluru City

ಮನವಿಯಂತೆ ಚಿತ್ರನಗರಿಗೆ 500 ಕೋಟಿ ರೂ. ಅನುದಾನ- ಸಿಎಂಗೆ ಅಭಿನಂದನೆ ಸಲ್ಲಿಸಿದ ಯಶ್

Published

on

– ಮೈಸೂರು ಫಿಲ್ಮ್ ಸಿಟಿಗೆ ಉತ್ತಮ ಜಾಗ
– ಫಿಲ್ಮ್ ಸಿಟಿ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಬೆಂಗಳೂರು: ಮನವಿಯಂತೆ ರಾಜ್ಯ ಬಜೆಟ್ ಮಂಡನೆಯಲ್ಲಿ ಚಿತ್ರನಗರಿಗೆ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಅಭಿನಂದನೆ ಸಲ್ಲಿಸಿದ್ದಾರೆ.

ನಗರದಲ್ಲಿ ಇಂದು ಓಬೆರಾಯನ ಕಥೆ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಬಳಿಕ ಮಾತನಾಡಿದ ಅವರು, ಇಡೀ ಚಿತ್ರರಂಗದ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮನವಿ ಸಲ್ಲಿಸಿದಾಗ ಸಿಎಂ ವೇದಿಕೆ ಮೇಲೆಯೇ ಮಾತು ಕೊಟ್ಟಿದ್ದರು. ಅದರಂತೆ ಇಂದು ಬಜೆಟ್‍ನಲ್ಲಿ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು ಬಹಳ ಖುಷಿ ತಂದಿದೆ ಎಂದರು. ಇದನ್ನೂ ಓದಿ: ಯಶ್ ಬೇಡಿಕೆ ಬೆನ್ನಲ್ಲೇ ಬೆಂಗ್ಳೂರಲ್ಲಿ ಫಿಲಂ ಸಿಟಿಗೆ 500 ಕೋಟಿ ರೂ. ಘೋಷಣೆ

ನಮ್ಮ ಸಿನಿಮಾ ಉದ್ಯಮಕ್ಕೆ ಫಿಲ್ಮ್ ಸಿಟಿ ತುಂಬಾ ಅವಶ್ಯಕತೆ ಇದೆ. ನಾವು ಎಲ್ಲೋ ಹೋಗಿ ಶೂಟ್ ಮಾಡುವಾಗ ನಮ್ಮ ರಾಜ್ಯದಲ್ಲೂ ಇಂತಹ ವ್ಯವಸ್ಥೆ ಇರಬೇಕು ಎನ್ನುವ ಅಭಿಪ್ರಾಯ ಬರುತ್ತದೆ. ಸಿನಿಮಾ ಕ್ಷೇತ್ರಕ್ಕೆ ಸೃಜನಶೀಲ ಕಲಾವಿದರು, ಬರಹಗಾರರು, ಯುವಕರಿಗೆ ಅಗತ್ಯವಿದೆ. ಸಿನಿಮಾ ಒಂದು ಉದ್ಯಮ. ಇದನ್ನು ಇನ್ನಷ್ಟು ಚೆನ್ನಾಗಿ ಬೆಳೆಯಲು ಸರ್ಕಾರ ಕೈ ಜೋಡಿಸಬೇಕು ಎಂದು ಕೇಳಿಕೊಂಡರು.

ಫಿಲ್ಮ್ ಸಿಟಿ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ. ಈ ಬಗ್ಗೆ ಡಿಸಿಎಂ ಅಶ್ವಥ್‍ನಾರಾಯಣ ಅವರೊಂದಿಗೆ ಮಾತನಾಡಿದ್ದೇನೆ. ಬೆಂಗಳೂರಿನ ಹೆಸರಘಟ್ಟದಲ್ಲಿ ಭೂಮಿ ಇದೆ ಅಂತ ಅವರು ಹೇಳಿದ್ದಾರೆ. ಅಲ್ಲಿಯೇ ಫಿಲ್ಮ್ ಸಿಟಿ ಮಾಡುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡಿದರೆ ಉತ್ತಮ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಏಕೆಂದರೆ ಅಲ್ಲಿ ಜನದಟ್ಟಣೆ, ಟ್ರಾಫಿಕ್ ಸಮಸ್ಯೆ ಇರುವುದಿಲ್ಲ. ಮೊದಲಿನಿಂದಲೂ ಮೈಸೂರಿನಲ್ಲಿ ಸಿನಿಮಾಗೆ ಪೂರಕ ವಾತಾವರಣ ಸಿಗುತ್ತಾ ಬಂದಿದೆ ಎಂದು ತಿಳಿಸಿದರು.

ಸದ್ಯಕ್ಕೆ ನಮ್ಮ ರಾಜ್ಯಕ್ಕೆ ಫಿಲ್ಮ್ ಸಿಟಿ ಅಗತ್ಯವಿದೆ. ಸರ್ಕಾರ ಎಲ್ಲಿ ನಿರ್ಮಾಣ ಮಾಡಿದರೂ ಓಕೆ. ಚಿತ್ರರಂಗದ ಹಿರಿಯರು ಈ ಬಗ್ಗೆ ಸರ್ಕಾರದ ಜೊತೆಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳಲಿ ಎಂದು ಹೇಳಿದರು.

Click to comment

Leave a Reply

Your email address will not be published. Required fields are marked *