ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಪತ್ನಿ, ನಟಿ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬದ ಸಲುವಾಗಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಮಾರ್ಚ್ 7ರಂದು ರಾಧಿಕಾ ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ರಾಧಿಕಾ ಹುಟ್ಟುಹಬ್ಬದಂದು ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸುತ್ತಿದ್ದರು. ಆದರೆ ಈ ಬಾರಿ ಯಶ್ ಮನೆಯ ಬಳಿ ಬರದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಯಶ್ ಬೇಡಿಕೆ ಬೆನ್ನಲ್ಲೇ ಬೆಂಗ್ಳೂರಲ್ಲಿ ಫಿಲಂ ಸಿಟಿಗೆ 500 ಕೋಟಿ ರೂ. ಘೋಷಣೆ
ನಗರದಲ್ಲಿ ಗುರುವಾರ ‘ಓಬೆರಾಯನ’ ಕತೆ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಬಳಿಕ ಮಾತನಾಡಿದ ಅವರು, “ಈ ಬಾರಿ ರಾಧಿಕಾ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇವೆ. ನಮ್ಮ ಮನೆಯಲ್ಲಿ ಈಗ ಮಕ್ಕಳಿರುವುದರಿಂದ ಹಾಗೂ ಎಲ್ಲ ಕಡೆ ವೈರಸ್ ಹರಡುತ್ತಿರುವ ಕಾರಣ ತುಂಬಾ ಜನ ಸೇರುವುದು ಬೇಡ. ಈ ಬಾರಿ ಯಾವುದೇ ಆಚರಣೆ ಇಲ್ಲ. ಸಂಜೆ ನಾನು ಹಾಗೂ ರಾಧಿಕಾ ಒಟ್ಟಿಗೆ ಎಲ್ಲಿಯಾದರೂ ಹೋಗಿ ಕಾಲ ಕಳೆಯುತ್ತೇವೆ ಅಷ್ಟೇ” ಎಂದು ಯಶ್ ತಿಳಿಸಿದ್ದಾರೆ. ಇದನ್ನೂ ಓದಿ: ಮನವಿಯಂತೆ ಚಿತ್ರನಗರಿಗೆ 500 ಕೋಟಿ ರೂ. ಅನುದಾನ- ಸಿಎಂಗೆ ಅಭಿನಂದನೆ ಸಲ್ಲಿಸಿದ ಯಶ್
ಇದೇ ವೇಳೆ ಕೊರೊನಾ ವೈರಸ್ ಬಗ್ಗೆ ಸಲಹೆ ನೀಡಿದ ಯಶ್, ನಾವು ಸ್ವಚ್ಛತೆ ಕಾಪಾಡಬೇಕು. ಎಲ್ಲರಿಗೂ ಶೇಕ್ ಹ್ಯಾಂಡ್ ಕೊಡುವ ಬದಲು ನಮ್ಮ ದೇಶದ ನಮಸ್ಕಾರ ಮಾಡಿ. ನಿಮಗೆ ಸ್ವಲ್ಪ ಆರೋಗ್ಯ ಹುಷಾರಿಲ್ಲ ಎಂದಾಗ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ. ತುಂಬಾ ಜನ ಇರುವ ಕಡೆ ಯಾರು ಸೇರಬೇಡಿ. ಇತ್ತೀಚೆಗೆ ನಾನು ಒಂದು ಜೋಕ್ ಓದಿದೆ. ಅದರಲ್ಲಿ ರಜೆ ಕೇಳಿದ್ರೂ ನಮ್ಮ ಬಾಸ್ ಕೆಮುತ್ತಿದ್ದ ಆದರೆ ಈಗ ನಾನು ಕೆಮ್ಮಿದ್ರೆ ಸಾಕು ರಜೆ ಕೊಡುತ್ತಾರೆ ಎಂದು ಯಶ್ ನಗುತ್ತಾ ಹೇಳಿದರು.
ಅಲ್ಲದೆ ಮನವಿಯಂತೆ ರಾಜ್ಯ ಬಜೆಟ್ ಮಂಡನೆಯಲ್ಲಿ ಚಿತ್ರನಗರಿಗೆ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಯಶ್ ಅಭಿನಂದನೆ ಸಲ್ಲಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಡೀ ಚಿತ್ರರಂಗದ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮನವಿ ಸಲ್ಲಿಸಿದಾಗ ಸಿಎಂ ವೇದಿಕೆ ಮೇಲೆಯೇ ಮಾತು ಕೊಟ್ಟಿದ್ದರು. ಅದರಂತೆ ಬಜೆಟ್‍ನಲ್ಲಿ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು ಬಹಳ ಖುಷಿ ತಂದಿದೆ ಎಂದು ಹೇಳಿದ್ದರು.