ನವದೆಹಲಿ: ಸಂಸದೆ ಪ್ರಿಯಾಂಕಾ ವಾದ್ರಾ ಅವರ ಪತಿ ಉದ್ಯಮಿ ರಾಬರ್ಟ್ ವಾದ್ರಾ (Robert Vadra) ಅವರಿಗೆ ಭೂ ವ್ಯವಹಾರದ ಹಣ ವರ್ಗಾವಣೆ ಪ್ರಕರಣಕ್ಕೆ (Money Laundering Case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate) ಸಮನ್ಸ್ ಜಾರಿ ಮಾಡಿದೆ.
ಹರಿಯಾಣದ ಗುರು ಗ್ರಾಮ್‌ನಲ್ಲಿ ಕಡಿಮೆ ಬೆಲೆಗೆ ಭೂಮಿ ಖರೀದಿಸಿ, ಅತಿ ಹೆಚ್ಚು ಬೆಲೆಗೆ ಜಮೀನು ಮಾರಾಟ ಮಾಡಿದ ಆರೋಪ ಅವರ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಏ.8 ರಂದು ಸಮನ್ಸ್ ನೀಡಲಾಗಿತ್ತು. ಅಂದು ವಿಚಾರಣೆಗೆ ಗೈರಾದ ಹಿನ್ನಲೆ ಮತ್ತೊಂದು ಸಮನ್ಸ್ ಜಾರಿ ಮಾಡಲಾಗಿದೆ.
ಇಡಿ ಕಚೇರಿಗೆ ತೆರಳುವಾಗ ಇಡಿ ಸಮನ್ಸ್‌ನ್ನು ಬಿಜೆಪಿಯ ರಾಜಕೀಯ ದ್ವೇಷ ಎಂದು ದೂರಿದ್ದಾರೆ. ನಾನು ಜನರ ಪರ ಧ್ವನಿ ಎತ್ತಿದಾಗಲೆಲ್ಲಾ ಅವರು ನನ್ನನ್ನು ನಿಗ್ರಹಿಸಲು ಪ್ರಯತ್ನಿಸುತ್ತಾರೆ. ನನ್ನಲ್ಲಿ ಮುಚ್ಚಿಡಲು ಏನೂ ಇಲ್ಲ. ಏನು ಕೇಳಿದರೂ ನಾನು ಅವರಿಗೆ ಉತ್ತರಿಸುತ್ತೇನೆ ಎಂದಿದ್ದಾರೆ.
ಫೆಬ್ರವರಿ 2008 ರಲ್ಲಿ ವಾದ್ರಾ ಅವರಿಗೆ ಸೇರಿದ ಸೈ ಲೈಟ್ ಹಾಸ್ಪಿಟಾಲಿಟಿ ಕಂಪನಿ ಗುರುಗ್ರಾಮ್‌ನ ಸೆಕ್ಟರ್ 83, ಶಿಕೊಪುರ, ಸಿಕಂದರ್‌ಪುರ, ಖೇದಿ ದೌಲಾ ಮತ್ತು ಸಿಹಿಯಲ್ಲಿ 7.5 ಕೋಟಿ ರೂ.ಗೆ ಭೂಮಿ ಖರೀದಿಸಿ, 55 ಕೋಟಿ ರೂ.ಗೆ ಮಾರಾಟ ಮಾಡಿದೆ ಎಂದು ದೂರು ನೀಡಲಾಗಿತ್ತು. ಇದು ಅಕ್ರಮ ಹಣ ವರ್ಗಾವಣೆ ಇರಬಹುದು ಎಂದು ಇಡಿ ಶಂಕಿಸಿದೆ. ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿ, ಹೇಳಿಕೆ ದಾಖಲಿಸುವಂತೆ ಇಡಿ ಸಮನ್ಸ್ ಜಾರಿ ಮಾಡಿದೆ.
ವಾದ್ರಾ ಅವರು ಇಡಿ ಮುಂದೆ ಹಾಜರಾದ ನಂತರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.