ಅಮೇಥಿಯಿಂದ ಕಣಕ್ಕಿಳಿಯುತ್ತಾರ ರಾಬರ್ಟ್ ವಾದ್ರಾ? – ಕುತೂಹಲ ಮೂಡಿಸಿದ ಗಾಂಧಿ ಕುಟುಂಬದ ಅಳಿಯನ ಹೇಳಿಕೆ

Public TV
2 Min Read
robert vadra

ನವದೆಹಲಿ: ಸೋನಿಯಗಾಂಧಿ ಅಳಿಯ, ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ (Robert Vadra) ಈಗ ಚುನಾವಣೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆ ಬಗ್ಗೆ ಮಾತನಾಡುತ್ತಾ ಅವರು ಪರೋಕ್ಷವಾಗಿ ಅಮೇಥಿಯಲ್ಲಿ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.

ಐದು ಅವಧಿಗೆ ರಾಯ್‌ಬರೇಲಿ ಪ್ರತಿನಿಧಿಸಿದ್ದ ಸೋನಿಯಾ ಗಾಂಧಿ ಚುನಾವಣಾ ರಾಜಕೀಯ ಬಿಟ್ಟು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಅಮೇಥಿಯಲ್ಲಿ ಸೋತ ರಾಹುಲ್ ಗಾಂಧಿ ವಯನಾಡಿನಲ್ಲಿ ಭರ್ಜರಿಯಾಗಿ ಗೆದ್ದು ಬೀಗಿದ್ದರು. ಸದ್ಯ ವಯನಾಡಿನಿಂದ ಸ್ಪರ್ಧಿಸಿರುವ ಅವರು ಅಮೇಥಿಯಿಂದ (Amethi) ಸ್ಪರ್ಧಿಸುವ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಹೀಗಾಗೀ ಗಾಂಧಿ ಕುಟುಂಬದ ಭದ್ರಕೋಟೆ ಎನಿಸಿಕೊಂಡಿರುವ ರಾಯ್‌ಬರೇಲಿ ಮತ್ತು ಅಮೇಥಿಯಲ್ಲಿ ಅಭ್ಯರ್ಥಿ ಯಾರು ಎನ್ನುವ ಚರ್ಚೆ ಶುರುವಾಗಿದೆ. ಕಾರ್ಯಕರ್ತರ‌ ನಂಬಿಕೆ ಪ್ರಕಾರ ಸೋನಿಯಾ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿಯಿಂದ ಪ್ರಿಯಾಂಕಾ ಗಾಂಧಿ (Priyanka Gandhi), ಅಮೇಥಿಯಿಂದ ರಾಹುಲ್ ಗಾಂಧಿ ಮತ್ತೆ ಕಣಕ್ಕಿಳಿಬಹುದು ಎಂದು ಅಂದಾಜಿಸಲಾಗಿದೆ. ಈ ಲೆಕ್ಕಚಾರದ ನಡುವೆ ರಾಬರ್ಟ್ ವಾದ್ರಾ ಹೇಳಿಕೆ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಮಹಿಳೆಯರನ್ನು ಹೇಗೆ ಗೌರವಿಸಬೇಕೆಂಬುದನ್ನು ಮೋದಿ ನೋಡಿ ಕಲಿಯಿರಿ: ಹೇಮಾ ಮಾಲಿನಿ

Sonia Gandhi Rahul Gandhi Priyanka Gandhi

ರಾಯ್ ಬರೇಲಿ ಅಥವಾ ಅಮೇಥಿಯನ್ನು ಪ್ರತಿನಿಧಿಸುವವರು ಜನರ ಪ್ರಗತಿ, ಅವರ ಭದ್ರತೆಗಾಗಿ ಕೆಲಸ ಮಾಡಬೇಕು. ತಾರತಮ್ಯದ ರಾಜಕೀಯವನ್ನು ಮಾಡಬಾರದು. ಅಮೇಥಿಯ ಜನರು ತಮ್ಮ ಪ್ರಸ್ತುತ ಸಂಸದರ ಬಗ್ಗೆ ತುಂಬಾ ಅಸಮಾಧಾನ ಹೊಂದಿದ್ದಾರೆ. ಹಾಲಿ ಸಂಸದೆ ಸ್ಮೃತಿ ಇರಾನಿ ಗಾಂಧಿ ಕುಟುಂಬ ಈ ಕ್ಷೇತ್ರದಿಂದ ದೂರ ಉಳಿಯಲಿ ಎಂದು ಬಯಸುತ್ತಿದ್ದಾರೆ. ಆದರೆ ಅಮೇಥಿ, ರಾಯ್‌ಬರೇಲಿ, ಸುಲ್ತಾನ್‌ಪುರ ಮತ್ತು ಜಗದೀಶ್‌ಪುರದ ಜನರಿಗಾಗಿ ಗಾಂಧಿ ಕುಟುಂಬವು ವರ್ಷಗಳಿಂದ ಶ್ರಮಿಸಿದೆ. ಗಾಂಧಿ ಕುಟುಂಬದ ಸದಸ್ಯರು ಕ್ಷೇತ್ರಕ್ಕೆ ಮರಳಬೇಕು ಎಂದು ಜನರು ಬಯಸುತ್ತಾರೆ. ಒಂದು ವೇಳೆ ನಾನು ಸಂಸತ್ತಿನ ಸದಸ್ಯನಾಗಲು ನಿರ್ಧರಿಸಿದರೆ ನಾನು ಅವರ ಕ್ಷೇತ್ರವನ್ನು ಪ್ರತಿನಿಧಿಸುತ್ತೇನೆ ಎಂದು ಅವರು ನಿರೀಕ್ಷಿಸುತ್ತಿದ್ದಾರೆ. ಜನರು ಈಗಾಗಲೇ ಸೋಶಿಯಲ್ ಮೀಡಿಯಾ ಮೂಲಕ ನನ್ನ ಸಂಪರ್ಕದಲ್ಲಿದ್ದಾರೆ. ನನ್ನ ಜನ್ಮದಿನವೂ ಆಚರಿಸುತ್ತಾರೆ ಎಂದು ರಾಬರ್ಟ್‌ ವಾದ್ರಾ ಹೇಳಿದ್ದಾರೆ.

ಈ ಮೂಲಕ ರಾಬರ್ಟ್ ವಾದ್ರಾ ತಮ್ಮ‌ ಬಯಕೆಯನ್ನು ಜನರ ಅಭಿಪ್ರಾಯದಂತೆ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಈ ಹೇಳಿಕೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಲಿದೆ ಗೊತ್ತಿಲ್ಲ. ಈಗಾಗಲೇ ಕುಟುಂಬ ರಾಜಕೀಯದ ಆರೋಪದಿಂದ ಸೊರಗಿರುವ ಗಾಂಧಿ ಕುಟುಂಬ ಅಳಿಯನನ್ನು ಕಣಕ್ಕಿಳಿಸುವ ಪ್ರಯತ್ನ ಮಾಡುತ್ತದೆಯೇ ಎಂಬುದು ಕುತೂಹಲದ ಸಂಗತಿ. ಇದನ್ನೂ ಓದಿ: ಕಿಡ್ನಾಪ್ ಉದ್ಯಮಕ್ಕೆ ಹೆಸರಾದವ್ರು ರಾಜ್ಯದಲ್ಲಿ ರಸ್ತೆ ನಿರ್ಮಿಸಲು ಬಿಡ್ಲಿಲ್ಲ- RJD ವಿರುದ್ಧ ಮೋದಿ ವಾಗ್ದಾಳಿ

Share This Article