ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣವಾಗಿ ದರ್ಶನ್ ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ತಾವು ಕಂಡಂತೆ ದರ್ಶನ್ ಹೇಗೆ? ಎಂಬುದನ್ನು ನಿರ್ಮಾಪಕ ಉಮಾಪತಿ ವಿವರಿಸಿದ್ದಾರೆ. 6 ಗಂಟೆ ನಂತರ ದರ್ಶನ್ ಬ್ಯಾಡ್ ಮ್ಯಾನ್ ಎಂದು ಉಮಾಪತಿ ಕುಟುಕಿದ್ದಾರೆ. ನಮ್ಮ ಚಟ ಚಟ್ಟ ಹತ್ತಿಸುವವರೆಗೂ ಆಗಬಾರದು ಎಂದು ದರ್ಶನ್‌ಗೆ (Darshan) ಉಮಾಪತಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ದರ್ಶನ್ ಕುಳಿತರೆ ಜುಟ್ಟು, ನಿಂತರೆ ಕಾಲು- ಗುಮ್ಮಿದ ಉಮಾಪತಿ
ನಾನು ಅವರು ಸ್ನೇಹಿತರಾಗಿರುವರೆಗೂ ದರ್ಶನ್ ಒಳ್ಳೆಯ ವ್ಯಕ್ತಿನೇ. 6 ಗಂಟೆ ನಂತರ ಬ್ಯಾಡ್ ಮ್ಯಾನ್, 6ರ ಮುಂಚೆ ಗುಡ್ ಮ್ಯಾನ್ ಅಂತ. ಅವರವರ ಹವ್ಯಾಸ, ಚಟ ಅವರನ್ನು ಹಾಳು ಮಾಡುತ್ತೆ. ನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ ಎಂದು ದರ್ಶನ್ ಕುರಿತು ಉಮಾಪತಿ ಮಾತನಾಡಿದ್ದಾರೆ.
ಅವತ್ತೂ ಈ ಪ್ರಕರಣದ ಬಗ್ಗೆ ಮಾತನಾಡಿದಾಗ, ಮನೆಯಲ್ಲಿ ಅವರದ್ದು ಏನೋ ಕೆಟ್ಟ ಸಮಯ. ಆ ತರಹ ನೀನು ಮಾತನಾಡಬಾರದು ಎಂದು ನನ್ನ ತಾಯಿ ಮತ್ತು ಪತ್ನಿ ನನಗೆ ತಿದ್ದಿದರು. ಹಾಗೇ ನಾವು ಕುಟುಂಬವನ್ನು ಇಟ್ಟುಕೊಂಡಿದ್ದೇವೆ. ಎಷ್ಟೇ ಬೆಳೆದರೂ ಕೂಡ ಮನುಷ್ಯ ತಗ್ಗಿ ಬಗ್ಗಿ ನಡೆಯಬೇಕಾಗುತ್ತದೆ ಎಂದು ಉಮಾಪತಿ ಮಾತನಾಡಿದ್ದಾರೆ.
ನಾನು ನೋಡಿದ ಹಾಗೆ ದರ್ಶನ್ ಒಳ್ಳೆಯ ಮನುಷ್ಯನೇ. ನನಗಂತೂ ಅವರು ಅನ್ಯಾಯ ಮಾಡಿಲ್ಲ. ಆದರೆ ಆ ಮೈಸೂರು ಕೇಸ್ ನಂತರ ಅವರ ನಡವಳಿಕೆ ಬದಲಾಯ್ತು. ಅವರ ಸಹವಾಸ ಕೂಡ ಬದಲಾಯಿತು ಎಂದು ಮಾತನಾಡಿದ್ದಾರೆ. ಇವತ್ತಿಗೂ ಹೇಳ್ತೀನಿ ಆ ಕಾಟೇರ ಟೈಟಲ್ ಅವರೇ ಕೊಟ್ಟಿರಬಹುದು. ಆದರೆ ಅದು ನನ್ನ ಬ್ಯಾನರ್‌ನಲ್ಲಿ ರಿಜಿಸ್ಟರ್ ಆಗಿದ್ದು, ಅದಕ್ಕೆ ದುಡ್ಡು ಕೊಟ್ಟಿದ್ದು ನಾನೇ ಎಂದಿದ್ದಾರೆ. ಸಿನಿಮಾದಿಂದ ನಾನು ದುಡ್ಡು ಮಾಡಿದ್ದಲ್ಲ. ಸಿನಿಮಾ ಮಾಡುವ ದುಡ್ಡಿನಲ್ಲಿ ನಾನು ವ್ಯಾಪಾರ ಮಾಡಿದ್ರೆ ಡಬಲ್ ದುಡಿಯುತ್ತೇನೆ. ಇವತ್ತು ಇಷ್ಟು ಗೌರವ, ಸ್ಥಾನಮಾನ ಸಿಕ್ಕಿದೆ ಅಂದರೆ ಅದು ಸಿನಿಮಾದಿಂದ ಎಂದು ಉಮಾಪತಿ ಮಾತನಾಡಿದ್ದಾರೆ.
ಅಂದಹಾಗೆ, ದರ್ಶನ್ ನಟನೆಯ ‘ರಾಬರ್ಟ್’ (Robert Film) ಸಿನಿಮಾವನ್ನು ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು. 2021ರಲ್ಲಿ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.