ಲಾಂಗ್ ಹಿಡಿದು ರಸ್ತೆಗೆ ಇಳಿಯುತ್ತಿದ್ದ ದರೋಡೆಕೋರರು ಅಂದರ್

Public TV
2 Min Read
CKB 3

-ರಾತ್ರಿ ವೇಳೆ ಒಂಟಿಯಾಗಿ ತೆರಳ್ತಿದ್ದ ಬೈಕ್‍ಗಳೇ ಟಾರ್ಗೆಟ್

ಚಿಕ್ಕಬಳ್ಳಾಪುರ: ಒಂಟಿಯಾಗಿ ಓಡಾಡುವವರನ್ನೇ ಟಾರ್ಗೆಟ್ ಮಾಡಿಕೊಂಡು ಮಧ್ಯರಾತ್ರಿಯಲ್ಲಿ ದರೋಡೆ ಮಾಡುತ್ತಿದ್ದ ಖತರ್ನಾಕ್ ತಂಡವನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಸ್ತೆಯಲ್ಲಿ ಒಂಟಿಯಾಗಿ ಓಡಾಡುತ್ತಿದ್ದ ಬೈಕ್‍ಗಳನ್ನ ತಡೆದು ಲಾಂಗ್‍ಗಳನ್ನ ತೋರಿಸಿ ಬೆದರಿಸಿ ಚಿನ್ನಭಾರಣ, ಹಣವನ್ನ ದೋಚುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಮೂಲದವರಾಗಿದ್ದು, ಸಂದೀಪ್ ರೆಡ್ಡಿ ಅಲಿಯಾಸ್ ಕೋತಿರೆಡ್ಡಿ, ಶ್ರೀನಿವಾಸ್, ನವೀನ್, ರಜನಿಕಾಂತ್, ಸೀನ, ಪ್ರದೀಪ್ ಹಾಗೂ 17 ವರ್ಷದ ಬಾಲಕನೊಬ್ಬ ಎಂದು ಗುರುತಿಸಲಾಗಿದೆ.

vlcsnap 2019 06 27 09h30m28s6

ಈ ಏಳು ಜನರ ದರೋಡೆ ಗ್ಯಾಂಗ್ ಹಲವಾರು ಸಣ್ಣಪುಟ್ಟ ಕೆಲಸಗಳನ್ನ ಮಾಡಿಕೊಂಡಿದ್ದರು. ಕೆಲಸ ಮುಗಿದ ನಂತರ ರಾತ್ರಿ ವೇಳೆಯಲ್ಲಿ ರಸ್ತೆಯಲ್ಲಿ ಸಿಕ್ಕ ಸಿಕ್ಕ ಒಂಟಿ ಬೈಕ್‍ಗಳು ಹಾಗೂ ದಂಪತಿಗಳನ್ನ ಬೆದರಿಸಿ ದರೋಡೆ ಮಾಡುವುದನ್ನೆ ಕಾಯಕ ಮಾಡಿಕೊಂಡಿದ್ದರು. ಕಳೆದ ತಿಂಗಳು ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಕಗ್ಗಲಹಳ್ಳಿ ಗ್ರಾಮದ ಬಳಿ ಒಂಟಿಯಾಗಿ ಬೈಕ್‍ನಲ್ಲಿ ತೆರಳುತ್ತಿದ್ದ ದಂಪತಿಯನ್ನ ಲಾಂಗ್ ಹಿಡಿದು ಬೆದರಿಸಿ ಮಾಂಗಲ್ಯ ಸೇರಿದಂತೆ, ಚಿನ್ನದ ಉಂಗುರವನ್ನ ಕಿತ್ತು ಪರಾರಿಯಾಗಿದ್ದರು. ಅದೇ ರೀತಿ ಇದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಒಂಟಿ ಬೈಕ್‍ಗಳನ್ನ ಟಾರ್ಗೆಟ್ ಮಾಡಿ ವ್ಯಕ್ತಿಗಳನ್ನ ಬೆದರಿಸಿ ಸಿಕ್ಕಸಿಕ್ಕ ವಸ್ತುಗಳನ್ನ ದೋಚಿ ಪರಾರಿಯಾಗಿದ್ದರು. ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಚನ್ನರಾಯಪಟ್ಟಣ ಪೊಲೀಸರು 7 ಮಂದಿ ದರೋಡೆಕೋರರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿವೈಎಸ್‍ಪಿ ಮೋಹನ್‍ಕುಮಾರ್ ಹೇಳಿದ್ದಾರೆ.

vlcsnap 2019 06 27 09h30m10s108

ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಕಗ್ಗಲಹಳ್ಳಿ ಸುತ್ತಮುತ್ತ ಆರೋಪಿಗಳಿಗಾಗಿ ಮಧ್ಯರಾತ್ರಿ ನಾಕಾಬಂಧಿ ಹಾಕಿಕೊಂಡು ಪೊಲೀಸರು ಹಗಲು ರಾತ್ರಿ ಕಾಯುತ್ತಿದ್ದರು. ಈ ವೇಳೆ ದರೋಡೆ ಮಾಡಿಕೊಂಡು ಬರುತ್ತಿದ್ದ ಅನುಮಾನಾಸ್ಪದ ಕಾರೊಂದನ್ನ ಚೇಸ್ ಮಾಡಿದ ಪೊಲೀಸರ ಕಾರಿಗೆ ಆರೋಪಿಗಳು ತಮ್ಮ ಸ್ವಿಪ್ಟ್ ಕಾರನ್ನ ಆಕ್ಸಿಡೆಂಟ್ ಮಾಡಿದ್ದರು. ಈ ವೇಳೆ ಪೊಲೀಸ್ ಜೀಪ್ ಹಾಗೂ ಕಳ್ಳರು ಬಳಸುತ್ತಿದ್ದ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ.

ಪೊಲೀಸ್ ಜೀಪಿಗೆ ಗುದ್ದಿದ್ದ ಖತರ್ನಾಕ್ ದರೋಡೆ ಗ್ಯಾಂಗ್ ಕಾರು, ಮೊಬೈಲ್‍ಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಆದರೆ ಪೊಲೀಸ್ ಜೀಪಿನ ಚಾಲಕ ಕಳ್ಳನೊಬ್ಬನನ್ನ ಚೇಸ್ ಮಾಡಿ ಹಿಡಿದಿದ್ದಾರೆ. ಜೊತೆಗೆ ದರೋಡೆಕೋರರು ಬಳಸುತ್ತಿದ್ದ ಪೋನ್‍ಗಳ ಆಧಾರದಲ್ಲಿ ದರೋಡೆ ಮಾಡುತ್ತಿದ್ದ 7 ಜನರ ಗ್ಯಾಂಗ್ ಅನ್ನ ಪೊಲೀಸರು ಪತ್ತೆಮಾಡಿ ಬಂಧಿಸಿದ್ದಾರೆ.

vlcsnap 2019 06 27 09h27m15s147

ಬಂಧಿತ 7 ಜನ ಆರೋಪಿಗಳ ಮೇಲೆ ಬೆಂಗಳೂರು ನಗರ, ಗ್ರಾಮಾಂತರ. ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಒಬ್ಬಬ್ಬರ ಮೇಲೆ ಐದಕ್ಕೂ ಹೆಚ್ಚು ಕೇಸ್‍ಗಳಿವೆ. ಅದರಲ್ಲೂ ಗ್ಯಾಂಗ್ ಲೀಡರ್ ಸಂದೀಪ್‍ರೆಡ್ಡಿ ಮೇಲೆ ವಿವಿಧ ಠಾಣೆಗಳಲ್ಲಿ 20 ಕೇಸ್‍ಗಳಿರೋದು ಪತ್ತೆಯಾಗಿದೆ. ಇನ್ನೂ ಬಂಧಿತರಿಂದ 8 ಲಕ್ಷ 76 ಸಾವಿರ ಮೌಲ್ಯದ ಒಂದು ಕಾರು, ಚಿನ್ನದ ಉಂಗುರ, ತಾಳಿ, ಎರಡು ಬೈಕ್‍ಗಳು, ಒಂದು ಲ್ಯಾಪ್ ಟಾಪ್ ಸೇರಿದಂತೆ ನಗದನ್ನ ವಶಕ್ಕೆ ಪಡೆಯಲಾಗಿದೆ ಎಂದು ಮೋಹನ್‍ಕುಮಾರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *