ಬೆಂಗಳೂರು: ಸಬ್ ಇನ್ಸ್‌ಪೆಕ್ಟರ್ ಡ್ರೆಸ್‌ನಲ್ಲಿ ಬಂದು 20 ಲಕ್ಷ ರೂ. ನಗದು, ಅರ್ಧ ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ (Bengaluru) ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೋಮವಾರ (ಫೆ.16) ಮಧ್ಯಾಹ್ನ ಬಿಇಎಲ್ ಬಡಾವಣೆಯ ಹೊಂಬಾಳೆಗೌಡರ ಮನೆಯಲ್ಲಿ ದರೋಡೆ ನಡೆದಿದೆ. ಘಟನೆ ವೇಳೆ ಹೊಂಬಾಳೆಗೌಡ (53), ಪತ್ನಿ ಮಂಗಳಮ್ಮ ಮತ್ತು ಎರಡೂವರೆ ವರ್ಷದ ಮೊಮ್ಮಗು ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ರಾಹುಲ್ ಬದಲು ಮಮತಾ ಇಂಡಿ ಕೂಟ ಮುನ್ನಡೆಸಲಿ: ಸಿಂಗ್ ಮಾಧ್ಯಮ ಸಲಹೆಗಾರ ಸಂಜಯ ಬಾರು
ಖಾಸಗಿ ಕಾರಿನಲ್ಲಿ ಯಲಹಂಕ ಪೊಲೀಸರು ಎಂದು ಹೇಳಿ ಸಬ್ ಇನ್ಸ್ಪೆಕ್ಟರ್ ಯೂನಿಫಾರ್ಮ್ ಧರಿಸಿ ಕೈಯಲ್ಲಿ ಡೈರಿ ಹಿಡಿದು ಒಬ್ಬ ಎಂಟ್ರಿ ಕೊಟ್ಟಿದ್ದು, ಹಿಂದೆ ಕ್ರೈಮ್ ಪಿಸಿ ರೀತಿ ಬ್ಯಾಗ್ ಹಾಕಿಕೊಂಡು ಮತ್ತೊಬ್ಬ ಎಂಟ್ರಿ ಕೊಟ್ಟಿದ್ದಾನೆ. ಮೊದಲು ಮನೆಗೆ ನುಗ್ಗಿ ಗನ್ ಮತ್ತು ಚಾಕು ತೋರಿಸಿ, ಮನೆ ಮಾಲೀಕರನ್ನ ಲಾಕ್ ಮಾಡಿದ್ದಾರೆ. ನಂತರ ಹೊಂಬಾಳೆ ಗೌಡ ಹಾಗೂ ಮಂಗಳಮ್ಮಗೆ ಟೇಪ್ ಸುತ್ತಿ ಕೂರಿಸಿದ್ದಾರೆ. ಬಳಿಕ ಬೆಡ್‌ರೂಮ್ ಜಾಲಾಡಿ ಸುಮಾರು 20 ಲಕ್ಷ ರೂ. ಹಾಗೂ ಅರ್ಧ ಕೆಜಿ ಚಿನ್ನಾಭರಣ ದೋಚಿದ್ದಾರೆ.
ಇದೇ ವೇಳೆ ಆರೋಪಿಗಳ ಕೃತ್ಯಕ್ಕೆ ಬೆದರಿ ಹೊಂಬಾಳೆಗೌಡರು ಹಣ, ಒಡವೆ ಕೊಟ್ಟಿದ್ದಾರೆ. ಕೊನೆಗೆ ಪತ್ನಿ ಮಾಂಗಲ್ಯ ಬೇಕಾದ್ರೂ ತಗೊಳಿ ಎಂದಿದ್ದಕ್ಕೆ ಆರೋಪಿಗಳು ಬೇಡ ಎಂದು ಬಿಟ್ಟು ಹೋಗಿದ್ದಾರೆ. ಪರಾರಿಯಾಗುವ ಇಬ್ಬರ ಮೊಬೈಲ್ ಕಸಿದುಕೊಂಡು ಹೋಗಿದ್ದಾರೆ. ಜೊತೆಗೆ ಸಿಸಿಟಿವಿ ಡಿವಿಆರ್ ಕೂಡ ಕಳಚಿಕೊಂಡು ಹೋಗಿದ್ದಾರೆ.
ಸದ್ಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಡಿಸಿಪಿ ನಾಗೇಶ್ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ರೋಹಿತ್ ಶೆಟ್ಟಿ ಮನೆ ಮೇಲೆ ಫೈರಿಂಗ್ – ಮತ್ತೆ ಆರು ಜನ ಅರೆಸ್ಟ್, ಈವರೆಗೂ ಒಟ್ಟು 11 ಮಂದಿ ಬಂಧನ

