ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ – ಆರೋಪಿಗೆ ಗುಂಡೇಟು ಕೊಟ್ಟ ಲೇಡಿ ಪಿಎಸ್‌ಐ

Public TV
1 Min Read
Robberycase Hubballi Crime PSI Kavitha

ಹುಬ್ಬಳ್ಳಿ: ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ದರೋಡೆಕೋರನಿಗೆ ಗುಂಡೇಟು ನೀಡಿದ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.

ಗುಂಡೇಟು ತಿಂದ ಆರೋಪಿಯನ್ನು ಹೈದರಾಬಾದ್ ಮೂಲದ ಫರ್ಹಾನ್ ಶೇಖ್ ಎಂದು ಗುರುತಿಸಲಾಗಿದೆ. ಆರೋಪಿ ಕೇಶ್ವಾಪುರ ವ್ಯಾಪ್ತಿಯಲ್ಲಿ ಚಿನ್ನದ ಅಂಗಡಿ ಕಳ್ಳತನ ಮಾಡಿದ್ದ. ಈತನನ್ನು ಗುರುವಾರ ಬಂಧಿಸಲಾಗಿತ್ತು. ಅಲ್ಲದೇ ವಿವಿಧ ರಾಜ್ಯಗಳಲ್ಲಿ ನಡೆದ ಕೊಲೆ, ಡಕಾಯಿತಿ ಮತ್ತು ದರೋಡೆ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಫರ್ಹಾನ್‌ಗೆ ಸಹಕಾರ ನೀಡಿದ ಇತರೆ ಆರೋಪಿಗಳನ್ನು ಬಂಧಿಸಲು ಗಾಮನ ಗಟ್ಟಿ ರಸ್ತೆಯ ತಾರಿಹಾಳ ಕ್ರಾಸ್ ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಕಾನ್ಸ್ಟೇಬಲ್ ಸುಜಾತ ಹಾಗೂ ಮಹೇಶ್ ಎಂಬವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪಿಎಸ್‌ಐ ಕವಿತಾ ಅವರು ಗಾಳಿಯಲ್ಲಿ 2 ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆದರೆ ಆತ ಪರಾರಿಯಾಗಲು ಯತ್ನಿಸಿದ್ದು ಆತನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡ ಪೊಲೀಸ್ ಸಿಬ್ಬಂದಿ ಮತ್ತು ಆರೋಪಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Share This Article