ಭೋಪಾಲ್: ಈರುಳ್ಳಿ ಬೆಲೆ ಗಗನಕ್ಕೇರಿದ್ದು ಗ್ರಾಹಕರಿಗೆ ಕಣ್ಣಿರು ತರಿಸಿದೆ. ಆದರೆ ಖದೀಮರು ಮಾತ್ರ ಇದನ್ನೇ ಲಾಭ ಮಾಡಿಕೊಂಡು ಮಧ್ಯಪ್ರದೇಶದಲ್ಲಿ ಈರುಳ್ಳಿ ಲೋಡ್ ಆಗಿದ್ದ ಲಾರಿಯನ್ನೇ ಕದ್ದಿದ್ದಾರೆ.
ಬರೋಬ್ಬರಿ 20 ಲಕ್ಷ ರೂ. ಮೌಲ್ಯದ ಈರುಳ್ಳಿಯನ್ನು ಕದ್ದು ಖದೀಮರು ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ನಾಸಿಕ್ ಮೂಲದ ವ್ಯಾಪಾರಿ ಪ್ರೇಮ್ ಚಂದ್ ಶುಕ್ಲಾ ಅವರು ಈರುಳ್ಳಿ ತುಂಬಿದ್ದ ಲಾರಿ ಕಳುವಾಗಿದೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಶುಕ್ಲಾ ಅವರು ಶಿವಪುರಿ ಮೂಲದ ಟ್ರಕ್‍ನಲ್ಲಿ ಸುಮಾರು 20 ಲಕ್ಷ ರೂ. ಮೌಲ್ಯದ ಈರುಳ್ಳಿಯನ್ನು ನಾಸಿಕ್‍ನಿಂದ ಲೋಡ್ ಮಾಡಿಸಿ ಗೋರಖ್‍ಪುರಕ್ಕೆ ಕಳುಹಿಸಿದ್ದರು. ಇದನ್ನೂ ಓದಿ: ಖದೀಮರ ಈರುಳ್ಳಿ ಮೋಹ- ಪೆಟ್ಟಿಗೆ ತುಂಬಾ ಹಣವಿದ್ದರೂ ಕದ್ದಿದ್ದು ಈರುಳ್ಳಿ ಮಾತ್ರ
Advertisement
Rajesh Singh Chandel, SP, Shivpuri said, "The truck was loaded with onions in Nashik and was travelling to Gorakhpur. It belonged to a transporter from Shivpuri. Driver and the truck, both went missing. After investigation, we've found an empty truck." #MadhyaPradesh pic.twitter.com/mGcn5FEyzL
— ANI (@ANI) November 28, 2019
Advertisement
ಈರುಳ್ಳಿ ತುಂಬಿದ ಲಾರಿ ನವೆಂಬರ್ 22ರಂದು ಗೋರಖ್‍ಪುರಕ್ಕೆ ತಲುಪಬೇಕಿತ್ತು. ಆದರೆ ಈವರೆಗೂ ಈರುಳ್ಳಿ ಮಾತ್ರ ಗೋರಖ್‍ಪುರಕ್ಕೆ ತಲುಪಿಲ್ಲ. ಹೀಗಾಗಿ ಶುಕ್ಲಾ ಅವರು ಈ ಸಂಬಂಧ ಟ್ರಕ್ ಮಾಲೀಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
Advertisement
ಪೊಲೀಸರು ತನಿಖೆ ಕೈಗೊಂಡಾಗ ಈರುಳ್ಳಿ ತುಂಬಿದ್ದ ಲಾರಿ ಶಿವಪುರಿಯಲ್ಲಿ ಪತ್ತೆಯಾಗಿದೆ. ಆದರೆ ಅದರಲ್ಲಿ ಈರುಳ್ಳಿ ಮಾತ್ರ ಇರಲಿಲ್ಲ. ಇತ್ತ ಲಾರಿಯನ್ನು ಬಿಟ್ಟು ಚಾಲಕ ಹಾಗೂ ಆತನ ಸಹಾಯಕ ಕೂಡ ನಾಪತ್ತೆಯಾಗಿದ್ದಾರೆ. ಗಗನಕ್ಕೇರಿದ ಈರುಳ್ಳಿ ಬೆಲೆಯಿಂದಾಗಿ ಲಾಭ ಪಡೆಯಲು ಖದೀಮರು ಈರುಳ್ಳಿ ಕದ್ದು ಎಸ್ಕೇಪ್ ಆಗಿರಬಹುದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಯವಿಟ್ಟು ಈರುಳ್ಳಿ ಕೇಳಬೇಡಿ- ಬೋರ್ಡ್ ಹಾಕಿದ ಹೋಟೆಲ್ ಮಾಲೀಕರು
Advertisement
ಈ ಹಿಂದೆ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದಲ್ಲಿದ್ದ ತರಕಾರಿ ವ್ಯಾಪಾರಿ ಅಕ್ಷಯ್ ದಾಸ್ ಅವರ ಮಳಿಗೆಯಲ್ಲಿ ಈರುಳ್ಳಿ ಕಳ್ಳತನವಾಗಿತ್ತು. ಸೋಮವಾರ ರಾತ್ರಿ ಮಳಿಗೆಗೆ ನುಗ್ಗಿದ್ದ ಕಳ್ಳರು ಗಲ್ಲಾ ಪೆಟ್ಟಿಯಲ್ಲಿನ ಹಣವನ್ನು ದೋಚದೆ, ಮಳಿಗೆಯಲ್ಲಿದ್ದ ಈರುಳ್ಳಿಯನ್ನು ಹೊತ್ತೊಯ್ದಿದ್ದರು. ಸುಮಾರು 50 ಸಾವಿರ ರೂ. ಮೌಲ್ಯದ ಈರುಳ್ಳಿ ಜೊತೆಗೆ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕಳ್ಳರು ಹೊತ್ತೊಯ್ದಿದ್ದರು.
ಅಷ್ಟೇ ಅಲ್ಲದೆ ಇತ್ತ ಕರ್ನಾಟಕದಲ್ಲೂ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿಯನ್ನೇ ರಾತ್ರೋರಾತ್ರಿ ಕಳ್ಳರು ಕಿತ್ತು ಪರಾರಿಯಾಗಿದ್ದಾರೆ.
ನರೇಗಲ್ ಗ್ರಾಮದ ರೈತ ಗುರುಬಸಯ್ಯ ಪ್ರಭುಸ್ವಾಮಿ ಮಠ ಅವರು ತಮ್ಮ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ಆದರೆ ಖದೀಮರು ಸುಮಾರು 34 ರಿಂದ 40 ಮೂಟೆಯಷ್ಟು ಈರುಳ್ಳಿ ಬೆಳೆಯನ್ನು ಕಳ್ಳತನ ಮಾಡಿದ್ದರು. ಗುರುಬಸಯ್ಯ ಅವರು 1.5 ಎಕರೆ ನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದರು. ಇನ್ನು ಎರಡು ದಿನದಲ್ಲಿ ಫಸಲು ಕಟಾವು ಮಾಡಬೇಕು ಎಂದು ರೈತ ಎಂದುಕೊಂಡಿದ್ದರು. ಆದರೆ ಫಸಲು ಕೈಗೆ ಬರುವ ಮುನ್ನವೇ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದು, ಈರುಳ್ಳಿ ಜೊತೆ ಸುಮಾರು 25 ಕೆಜಿಯಷ್ಟು ಮೆಣಸಿನಕಾಯಿ ಸಹ ಕಳ್ಳತನ ಮಾಡಿದ್ದಾರೆ.