Connect with us

ಹೆಬ್ಬಗೋಡಿಯಲ್ಲಿ ಮಾಲೀಕನಿಗೆ ಚಾಕು ಹಾಕಿ ಅಂಗಡಿ ಲೂಟಿ

ಹೆಬ್ಬಗೋಡಿಯಲ್ಲಿ ಮಾಲೀಕನಿಗೆ ಚಾಕು ಹಾಕಿ ಅಂಗಡಿ ಲೂಟಿ

– ಅತ್ತಿಗುಪ್ಪೆಯಲ್ಲಿ ಯುವಕನನ್ನು ತಡೆದು ದರೋಡೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡರು, ಪೋಕರಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಕತ್ತಲಾದ್ರೆ ಒಬ್ಬೊಬ್ಬರೇ ಓಡಾಡೋದು ಕಷ್ಟವಾಗಿದೆ. ಬೆಂಗಳೂರು ಬೀದಿಗಳಲ್ಲಿ ಹೆಣ್ಣುಮಕ್ಕಳಿಗೆ ಲೈಂಗಿಕ ದೌರ್ಜನ್ಯದ ಭೀತಿ ಒಂದೆಡೆಯಾದ್ರೆ, ಪುರುಷರ ಕೈಯಿಂದ ಹಣ, ಮೊಬೈಲ್ ಮತ್ತಿತರ ವಸ್ತುಗಳನ್ನು ದೋಚೋದು ಮತ್ತೊಂದೆಡೆ. ಎರಡೆರಡು ಬೈಕ್‍ಗಳಲ್ಲಿ ಬರ್ತಾರೆ. ಆಯಕಟ್ಟಿನ ಜಾಗದಲ್ಲಿ ಅಡ್ಡಹಾಕ್ತಾರೆ. ಚಾಕು ತೋರಿಸಿ, ಹಲ್ಲೆ ನಡೆಸಿ, ಕೈಯಲ್ಲಿ, ಜೇಬಲ್ಲಿ, ಮೈಯಲ್ಲಿ ಇರೋದನ್ನು ದೋಚ್ತಾರೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿಯೂ ದರೋಡೆ ಪ್ರಕರಣಗಳು ಹೆಚ್ಚಾಗ್ತಿವೆ. ಕಳೆದ ರಾತ್ರಿ ಹೆಬ್ಬಗೋಡಿಯ ವಿನಾಯಕ ನಗರದಲ್ಲಿ ಉತ್ತರಪ್ರದೇಶ ಮೂಲದ ವಿಕಾಶ್ ಮಿಶ್ರಾ ಅನ್ನೋರ ಮೊಬೈಲ್ ಶಾಪ್‍ಗೆ ನುಗ್ಗಿದ ದುಷ್ಕರ್ಮಿಗಳು, ಅಂಗಡಿಯ ಮಾಲೀಕನಿಗೆ ಚಾಕುವಿನಿಂದ ಇರಿದು ಹಣ ಹಾಗೂ ಮೊಬೈಲ್‍ಗಳನ್ನ ದೋಚಿ ಪರಾರಿಯಾಗಿದ್ದಾರೆ.

ಲಾಂಗು ಮಚ್ಚುಗಳಿಂದ ದುಷ್ಕರ್ಮಿಗಳು ಅಂಗಡಿ ಮೇಲೆ ದಾಳಿ ನಡೆಸಿದ್ದು, ರೌಡಿಶೀಟರ್ ನೇಪಾಳಿ ಮಂಜನ ಸಹಚರರಾದ ಕಫತ್ವಾಲ್ ಅಜಿತ್, ಚಂದನ್ ಸೇರಿದಂತೆ ಆರು ಮಂದಿಯ ತಂಡ ಈ ಕೃತ್ಯ ನಡೆಸಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿರೋ ಅಂಗಡಿ ಮಾಲೀಕ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದಾರೆ. ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದರೋಡೆಕೋರರ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಮಾರ್ಚ್ 9ರಂದು ರಾತ್ರಿ ವಿಜಯನಗರದ ಅತ್ತಿಗುಪ್ಪೆಯಲ್ಲಿ ಮತ್ತೊಂದು ದರೋಡೆ ನಡೆದಿದೆ. ಮಾಜಿ ಕಾರ್ಪೋರೇಟರ್ ದೊಡ್ಡಣ್ಣ ಅವರ ಮನೆಯ ಮುಂದೆಯೇ ದರೋಡೆ ನಡೆದಿದೆ. ದಾರಿಯಲ್ಲಿ ಒಬ್ಬಂಟಿಯಾಗಿ ತೆರಳ್ತಿದ್ದ ಯುವಕನ ಮೇಲೆ ಬೈಕ್‍ಗಳಲ್ಲಿ ಬಂದ ಮೂವರು ದಾಳಿ ನಡೆಸಿದ್ದು, ಯುವಕನನ್ನು ಹಿಂಬದಿಯಿಂದ ನೂಕಿ, ಚಾಕು ತೋರಿಸಿ ಬೆದರಿಸಿದ್ದಾರೆ. ದರೋಡೆಕೋರರಿಗೆ ಹೆದರಿ ಮೊಬೈಲ್, ಪರ್ಸ್ ಕೊಟ್ಟು ಯುವಕ ಬಚಾವಾಗಿದ್ದಾನೆ. ದರೋಡೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

https://www.youtube.com/watch?v=nXnHzlW_434&feature=youtu.be

Advertisement
Advertisement