ಬಾಗಲಕೋಟೆ: ಹಾಡಹಗಲೇ ಮನೆಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಗಳು ಮಹಿಳೆಯ ಕೈ, ಕಾಲುಗಳನ್ನು ಕಟ್ಟಿ ಬೆಂಕಿ ಹಚ್ಚಿ ಮನೆಯಲ್ಲಿದ್ದ ಒಂದು ಲಕ್ಷ ರೂ. ದರೋಡೆ ಮಾಡಿರುವ ಆಘಾತಕಾರಿ ಘಟನೆ ಬಾಗಲಕೋಟೆಯ ನವನಗರ ವಾಂಬೆ ಕಲೋನಿಯಲ್ಲಿ ನಡೆದಿದೆ.
28 ವರ್ಷದ ರೂಪಾ ಹಳ್ಳದ ಮನಿ ಕೊಲೆಯಾದ ಮಹಿಳೆ. ಮೃತ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಕೆಲಸ ನಿಮಿತ್ತ ರೂಪಾ ಅವರ ಪತಿ ಒಂದು ಲಕ್ಷ ರೂ. ಹಣವನ್ನು ಮನೆಯಲ್ಲಿ ತಂದಿಟ್ಟಿದ್ದರು. ಈ ಮಾಹಿತಿ ತಿಳಿದ ದುಷ್ಕರ್ಮಿಗಳು ಇಂದು ಮಧ್ಯಾಹ್ನ ಒಂದು ಗಂಟೆ ವೇಳೆಗೆ ಮನೆಗೆ ನುಗ್ಗಿ ರೂಪಾ ಅವರ ಕೈ ಕಾಲು ಕಟ್ಟಿ ಕೃತ್ಯ ಎಸಗಿದ್ದಾರೆ.
ಮನೆಯಲ್ಲಿದ್ದ ಹಣ ದೋಚಿದ ಆರೋಪಿಗಳು ನಂತರ ಸಾಕ್ಷ್ಯ ನಾಶಕ್ಕಾಗಿ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆ ವೇಳೆ ರೂಪಾ ಅವರ ಪತಿ ಯಮನಪ್ಪ ಸೆಂಟ್ರಿಂಗ್ ಕೆಲಸಕ್ಕೆ ಹೋಗಿದ್ದರು. ಈ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದ ಬಾಗಲಕೋಟೆ ಸಿಪಿಐ ಎಂ. ಎಸ್ ತುಳಸಿಗೇರಿ, ಪಿಎಸ್‍ಐ ಸಂತೋಷ್ ಹಳ್ಳೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನವನಗರ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ದೂರು ದಾಖಲಾಗಿದೆ.